ಬೆಂಗಳೂರು: ಆರ್ ಸಿಬಿ ಐಪಿಎಲ್ ಸಂಭ್ರಮಾಚರಣೆ ವೇಳೆ ಕಾಲ್ತುಳಿತವಾದ ಬಳಿಕ ಸೋಷಿಯಲ್ ಮೀಡಿಯಾ ಸೈಲೆಂಟ್ ಆಗಿತ್ತು. ಇದೀಗ ಮೂರು ತಿಂಗಳ ಬಳಿಕ ಆರ್ ಸಿಬಿ ಮೊದಲ ಪೋಸ್ಟ್ ಮಾಡಿ ಮಹತ್ವದ ಘೋಷಣೆ ಮಾಡಿದೆ.
ಪಂಜಾಬ್ ಕಿಂಗ್ಸ್ ತಂಡವನ್ನು ಐಪಿಎಲ್ 2025 ಫೈನಲ್ ನಲ್ಲಿ 6 ರನ್ ಗಳಿಂದ ಸೋಲಿಸಿದ ಆರ್ ಸಿಬಿ ಮೊದಲ ಬಾರಿಗೆ ಕಪ್ ಗೆದ್ದು ಬೀಗಿತ್ತು. ಆದರೆ ಈ ಸಂಭ್ರಮ ಬಹಳ ಹೊತ್ತು ಇರಲಿಲ್ಲ. ಮರುದಿನವೇ ಆರ್ ಸಿಬಿ ಬೆಂಗಳೂರಿಗೆ ಸಂಭ್ರಮಾಚರಣೆ ಮಾಡಲು ಬಂದಿದ್ದೇ ದೊಡ್ಡ ದುರಂತಕ್ಕೇ ಕಾರಣವಾಯ್ತು.
ಆರ್ ಸಿಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಜನಸಾಗರವೇ ಚಿನ್ನಸ್ವಾಮಿ ಮೈದಾನ ಬಳಿ ಸೇರಿತ್ತು. ಈ ವೇಳೆ ಕಾಲ್ತುಳಿತವಾಗಿ 11 ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಆರ್ ಸಿಬಿ ಇನ್ ಸ್ಟಾಗ್ರಾಂ ಖಾತೆ ಸೈಲೆಂಟ್ ಆಗಿತ್ತು. ಇದೀಗ ಬರೋಬ್ಬರಿ ಮೂರು ತಿಂಗಳ ಬಳಿಕ ಮೊದಲ ಪೋಸ್ಟ್ ಹಾಕಿದೆ.
ಕೇವಲ ಪೋಸ್ಟ್ ಮಾತ್ರವಲ್ಲ, ಮಹತ್ವದ ಘೋಷಣೆಯನ್ನೂ ಮಾಡಿದೆ. ಅಭಿಮಾನಿಗಳಿಗಾಗಿಯೇ ಆರ್ ಸಿಬಿ ಕೇರ್ಸ್ ಎನ್ನುವ ಸಹಾಯವಾಣಿ ತೆರೆದಿದೆ. ನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ಕಾಳಜಿಯೇ ನಮ್ಮ ಪ್ರತಿಜ್ಞೆ ಎಂದು ಬರೆದುಕೊಂಡಿದೆ.