ಬೆಂಗಳೂರು: ಆರ್ ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೈಕೋರ್ಟ್ ಗೆ ವರದಿ ಸಲ್ಲಿಸಿದ್ದು, ವಿರಾಟ್ ಕೊಹ್ಲಿ ವಿಡಿಯೋ ತೋರಿಸಿ ಆರ್ ಸಿಬಿಯೇ ಈ ಅವಾಂತರಕ್ಕೆ ಕಾರಣ ಎಂದಿದೆ.
ಆರ್ ಸಿಬಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಲು ಹೈಕೋರ್ಟ್ ಸೂಚಿಸಿತ್ತು. ಅದರಂತೆ ಸರ್ಕಾರ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸಿದ್ದು ಇದರಲ್ಲಿ ದುರಂತಕ್ಕೆ ಆರ್ ಸಿಬಿಯೇ ಕಾರಣ ಎಂದಿದೆ.
ಆರ್ ಸಿಬಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ವಿರಾಟ್ ಕೊಹ್ಲಿ ವಿಡಿಯೋ ಮೂಲಕ ಫ್ರಾಂಚೈಸಿ ಕರೆ ನೀಡಿತ್ತು. ಇದರಿಂದಾಗಿಯೇ ನಿರೀಕ್ಷೆಗೂ ಮೀರಿ ಜನ ಬಂದರು. ಹೀಗಾಗಿ ಪರಿಸ್ಥಿತಿ ಕೈ ಮೀರಿ ಹೋಯಿತು ಎಂದು ವರದಿಯಲ್ಲಿ ಹೇಳಲಾಗಿದೆ.
ವಿಕ್ಟರಿ ಪೆರೇಡ್ ಆಯೋಜಿಸುವ ಮೊದಲು ಆರ್ ಸಿಬಿ ಸೂಕ್ತ ರೀತಿಯಲ್ಲಿ ಒಪ್ಪಿಗೆ ಪಡೆದುಕೊಂಡಿರಲಿಲ್ಲ. ಪೊಲೀಸರು ಕಾರ್ಯಕ್ರಮ ಆಯೋಜಿಸಲು ಒಪ್ಪಿಗೆ ನೀಡದೇ ಇದ್ದರೂ ಆಯೋಜಿಸಲಾಯಿತು ಎಂದು ದೂರಲಾಗಿದೆ. ಪೊಲೀಸರು ನಿರಾಕರಿಸಿದ್ದರೂ ಆರ್ ಸಿಬಿ ವಿಕ್ಟರಿ ಪೆರೇಡ್ ನಲ್ಲಿ ಪಾಲ್ಗೊಳ್ಳುವಂತೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳನ್ನು ಆಹ್ವಾನಿಸಿ, ಪ್ರಮೋಷನ್ ಮಾಡಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.