Publish Date: Wed, 11 Jun 2025 (16:39 IST)
Updated Date: Wed, 11 Jun 2025 (16:42 IST)
ಬೆಂಗಳೂರು: ಆರ್ ಸಿಬಿ ವಿಜಯೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರನ್ನು ಯಾರು ಕರೆದಿದ್ದು ಎಂದು ಗೊತ್ತಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ಈಗ ಉಲ್ಟಾ ಹೊಡೆದಿದ್ದಾರೆ. ರಾಜ್ಯಪಾಲರನ್ನು ನಾನೇ ಫೋನ್ ಮೂಲಕ ಕರೆದಿದ್ದೆ ಎಂದಿದ್ದಾರೆ.
ಗೌರಿ ಬಿದನೂರಿನಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರನ್ನು ತಾವೇ ಕರೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಆರ್ ಸಿಬಿ ಸನ್ಮಾನ ಕಾರ್ಯಕ್ರಮಕ್ಕೆ ರಾಜ್ಯಪಾಲರನ್ನು ನಾನೇ ಫೋನ್ ಮಾಡಿ ನಾನು ಹೋಗ್ತಿದ್ದೇನೆ ನೀವೂ ಬನ್ನಿ ಎಂದು ಕರೆದಿದ್ದೆ ಎಂದು ಒಪ್ಪಿಕೊಂಡಿದ್ದಾರೆ.
ಇದಕ್ಕೆ ಮೊದಲು ಸಿಎಂ ಸಿದ್ದರಾಮಯ್ಯ ರಾಜ್ಯಪಾಲರಿಗೆ ಯಾರು ಆಹ್ವಾನ ನೀಡಿದ್ದರು ಎಂದು ನನಗೆ ಗೊತ್ತಿಲ್ಲ ಎಂದಿದ್ದರು. ಇದರ ಬೆನ್ನಲ್ಲೇ ರಾಜಭವನದಿಂದ ಸಿಎಂ ಅವರಿಂದಲೇ ಆಹ್ವಾನ ಬಂದಿತ್ತು ಎಂದು ಸ್ಪಷ್ಟನೆ ಬಂದಿತ್ತು. ಇದು ಸಿಎಂ ಸಿದ್ದರಾಮಯ್ಯಗೆ ಮುಜುಗರ ತಂದಿತ್ತು.
ಇದರ ಬೆನ್ನಲ್ಲೇ ಈಗ ಸ್ವತಃ ಸಿದ್ದರಾಮಯ್ಯನವರೇ ತಾವೇ ಕರೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ಸಿಎಂ ಈ ಹೇಳಿಕೆ ಮತ್ತೆ ಸಾರ್ವಜನಿಕವಾಗಿ ಭಾರೀ ಟೀಕೆಗೆ ಗುರಿಯಾಗಿದೆ. ಹಾಗಿದ್ದರೆ ಮೊನ್ನೆ ನನಗೆ ಗೊತ್ತೇ ಇಲ್ಲ ಎಂದಿದ್ದು ಸುಳ್ಳೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.