Publish Date: Wed, 11 Jun 2025 (09:27 IST)
Updated Date: Wed, 11 Jun 2025 (10:51 IST)
ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ದುರಂತವಾದ ಬಳಿಕ ಸರ್ಕಾರದ ಮೇಲೆ ಅಪವಾದ ಬಂದಾಗ ರಾಜ್ಯಪಾಲರನ್ನು ಯಾರು ಆಹ್ವಾನಿಸಿದ್ದು ಎಂದು ನಮಗೆ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇದೀಗ ರಾಜಭವನದಿಂದಲೇ ಇದಕ್ಕೆ ಸ್ಪಷ್ಟನೆ ಬಂದಿದ್ದು ಸಿಎಂ ಕಡೆಯಿಂದಲೇ ಆಹ್ವಾನ ಬಂದಿದ್ದು ಎನ್ನಲಾಗಿದೆ. ಈಗೇನಂತಾರೆ ಸಿಎಂ ಸಿದ್ದರಾಮಯ್ಯ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.
ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಹೊಣೆಯನ್ನು ಪೊಲೀಸರು ಮತ್ತು ಆರ್ ಸಿಬಿ, ಕೆಎಸ್ ಸಿಎ ಮೇಲೆ ಹೊರಿಸಲು ಸರ್ಕಾರ ಪ್ರಯತ್ನ ನಡೆಸುತ್ತಿರುವುದು ಈಗ ರಹಸ್ಯವಾಗೇನೂ ಉಳಿದಿಲ್ಲ. ಸ್ವತಃ ಸಿಎಂ ಈ ಕಾರ್ಯಕ್ರಮ ಆಯೋಜಿಸಿದ್ದು ನಾವಲ್ಲ, ನಮಗೆ ಮುಜುಗರವಾಗಲ್ಲ ಎಂದಿದ್ದರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ನಡೆಸುವುದೂ ನಮ್ಮ ಯೋಜನೆಯಾಗಿರಲಿಲ್ಲ. ರಾಜ್ಯಪಾಲರನ್ನು, ಇತರ ಗಣ್ಯರನ್ನು ಯಾರು ಆಹ್ವಾನಿಸಿದ್ದು ನಮಗೆ ಗೊತ್ತಿಲ್ಲ ಎಂದಿದ್ದರು. ಆದರೆ ಇದಕ್ಕೀಗ ರಾಜಭವನದಿಂದಲೇ ಉತ್ತರ ಬಂದಿದೆ. ರಾಜಭವನದ ಉತ್ತರ ಈಗ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ರಾಜ್ಯಪಾಲರ ಉತ್ತರದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ನಮಗೆ ಗೊತ್ತೇ ಇಲ್ಲ ಎಂದಿರುವುದು ಸುಳ್ಳೇ ಅಥವಾ ಜವಾಬ್ಧಾರಿಯಿಂದ ಜಾರಿಕೊಳ್ಳುವ ಯತ್ನವೇ ಎಂಬ ಅನುಮಾನ ಶುರುವಾಗಿದೆ. ಮುಖ್ಯಮಂತ್ರಿ ಕಡೆಯಿಂದ ಅಧಿಕೃತ ಆಹ್ವಾನ ಬಂದಿದ್ದಕ್ಕೇ ರಾಜ್ಯಪಾಲರು ಭಾಗಿಯಾಗಿದ್ದರು ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.