ಬೆಂಗಳೂರು: ಡಬ್ಲ್ಯುಪಿಎಲ್ ಟೂರ್ನಿ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಯಾನ್ಸ್ ವಿರಾಟ್ ಕೊಹ್ಲಿ ಪುತ್ರ ಅಕಾಯ್ ನನ್ನು ಸ್ವಾಗತಿಸಿ ಪೋಸ್ಟರ್ ಹಿಡಿದು ನಿಂತಿದ್ದು ವಿಶೇಷವಾಗಿತ್ತು.
ಮಹಿಳೆಯರ ಪ್ರೀಮಿಯರ್ ಲೀಗ್ ಟೂರ್ನಿ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದೆ. ಮೊನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡುವ ಪಂದ್ಯದ ವೇಳೆ ಅಭಿಮಾನಿಗಳಲ್ಲಿ ಕೆಲವರು ಬೇಬಿ ಅಕಾಯ್ ಗೆ ಆರ್ ಸಿಬಿಗೆ ಸ್ವಾಗತ ಎಂಬ ಫಲಕ ಹಿಡಿದು ನಿಂತಿದ್ದರು.
ಈ ಪೋಸ್ಟರ್ ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೆಬ್ರವರಿ 15 ರಂದು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ಇದಾಗಿ ನಾಲ್ಕು ದಿನಗಳ ನಂತರ ಕೊಹ್ಲಿ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳು ಅಕಾಯ್ ಕೊಹ್ಲಿ ಹೆಸರಿನಲ್ಲಿ ಅನೇಕ ಇನ್ ಸ್ಟಾಗ್ರಾಂ ಪುಟಗಳನ್ನು ತೆರೆದಿದ್ದರು.
ಇನ್ನು ಕೆಲವರು ಎಐ ತಂತ್ರಜ್ಞಾನ ಬಳಸಿ ಕೊಹ್ಲಿ ಪುತ್ರನ ಫೋಟೋ ಪ್ರಕಟಿಸಿದ್ದರು. ಇದೀಗ ಆರ್ ಸಿಬಿ ಪಂದ್ಯದಲ್ಲೂ ಕೊಹ್ಲಿ ಪುತ್ರನ ಹೆಸರು ಕಂಡುಬಂದಿದೆ. ಅಕಾಯ್ ಗೆ ಸ್ವಾಗತ ಎಂದು ಶುಭ ಕೋರಿದರೆ ಮತ್ತೆ ಕೆಲವರು ಬೇಬಿ ಅಕಾಯ್ ಆರ್ ಸಿಬಿ ಪಂದ್ಯ ನೋಡುತ್ತಿರುವಂತೆ ಮೆಮೆ ಪ್ರಕಟಿಸಿದ್ದಾರೆ.