ಮುಂಬೈ: ಏಕದಿನ ವಿಶ್ವಕಪ್ 2023 ರ ಫೈನಲ್ ಸೋಲು ಟೀಂ ಇಂಡಿಯಾ ಕ್ರಿಕೆಟಿಗರನ್ನು ಧೃತಿಗೆಡಿಸಿತ್ತು. ಫೈನಲ್ ಸೋತ ದಿನ ಡ್ರೆಸ್ಸಿಂಗ್ ರೂಂನಲ್ಲಿ ಏನಾಗಿತ್ತು ಎಂಬುದನ್ನು ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಎಸ್. ಬದರೀನಾಥ್ ಅವರ ಯೂ ಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಶ್ವಿನ್ ವಿಶ್ವಕಪ್ ಫೈನಲ್ ಸೋತ ಬಳಿಕ ತಂಡದ ಡ್ರೆಸ್ಸಿಂಗ್ ರೂಂ ವಾತಾವರಣ ಹೇಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಆ ದಿನ ಡ್ರೆಸ್ಸಿಂಗ್ ರೂಂ ವಾತಾವರಣ ತೀರಾ ಮಂಕಾಗಿತ್ತು. ರೋಹಿತ್, ಕೊಹ್ಲಿ ಅಳುತ್ತಿದ್ದರು. ಅದನ್ನು ನೋಡಲು ಆಗಲಿಲ್ಲ. ರೋಹಿತ್ ಈ ತಂಡಕ್ಕಾಗಿ ಸಕಲ ಪ್ರಯತ್ನ ಮಾಡಿದ್ದರು. ಪ್ರತಿಯೊಬ್ಬ ಆಟಗಾರನನ್ನು ಅರ್ಥ ಮಾಡಿಕೊಂಡಿದ್ದರು. ನಿದ್ರೆಗೆಟ್ಟು ತಂಡದ ಮೀಟಿಂಗ್ ಮಾಡುತ್ತಿದ್ದರು. ಅವರು ಈ ಟೂರ್ನಮೆಂಟ್ ನಲ್ಲಿ ನಾಯಕನಾಗಿ ತೋರಿದ ನಿರ್ವಹಣೆ ಅನುಕರಣೀಯ ಎಂದಿದ್ದಾರೆ.
ಫೈನಲ್ ಪಂದ್ಯ ಸೋತ ಬೆನ್ನಲ್ಲೇ ರೋಹಿತ್, ಕೊಹ್ಲಿ ಕಣ್ಣೀರು ಹಾಕುತ್ತಲೇ ಮೈದಾನ ತೊರೆದಿದ್ದರು. ಇದು ಪೆವಿಲಿಯನ್ ನಲ್ಲೂ ಮುಂದುವರಿದಿತ್ತು ಎಂದು ಅಶ್ವಿನ್ ಸಂದರ್ಶನದಲ್ಲಿ ಸ್ಪಷ್ಟವಾಗಿದೆ. ಕೊಹ್ಲಿ ಮತ್ತು ರೋಹಿತ್ ಇಬ್ಬರೂ ನ್ಯಾಚುರಲ್ ಲೀಡರ್ಸ್. ಇಬ್ಬರೂ ಈ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಅನುಭವದ ಧಾರೆಯೆರೆದಿದ್ದರು. ಈ ಟೂರ್ನಮೆಂಟ್ ನಲ್ಲಿ ಆಡಿದ ಪ್ರತೀ ಆಟಗಾರರು ಅನುಭವಿಗಳಾಗಿದ್ದರು. ಯಾರಿಗೆ ತಮ್ಮ ಪಾತ್ರ ಏನು ಎಂಬುದು ಚೆನ್ನಾಗಿ ಗೊತ್ತಿತ್ತು ಎಂದಿದ್ದಾರೆ ಅಶ್ವಿನ್.