ಕೋಲ್ಕೊತ್ತಾ: ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ತನ್ನ ಬ್ಯಾಟಿಂಗ್ ತಪ್ಪಿಗೆ ಕರ್ನಾಟಕ ದೊಡ್ಡ ಬೆಲೆಯನ್ನೇ ತೆತ್ತಿದೆ. ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಬಂಗಾಳ ವಿರುದ್ಧ 174 ರನ್ ಗಳ ಹೀನಾಯ ಸೋಲು ಅನುಭವಿಸಿದೆ.
ದ್ವಿತೀಯ ಇನಿಂಗ್ಸ್ ನಲ್ಲಿ ಕರ್ನಾಟಕ ರನ್ ಗಳಿಗೆ 177 ಆಲೌಟ್ ಆಗುವ ಮೂಲಕ ಫೈನಲ್ ಕನಸು ಛಿದ್ರವಾಗಿದೆ. ಬಹುಶಃ ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ ಕೇವಲ 122 ರನ್ ಗಳಿಗೆ ಆಲೌಟ್ ಆಗದೇ ಇರುತ್ತಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ತನ್ನ ತಪ್ಪಿಗೆ ತಾನೇ ಹಳಿದುಕೊಳ್ಳುವಂತಾಗಿದೆ.
ದ್ವಿತೀಯ ಇನಿಂಗ್ಸ್ ನಲ್ಲಿ ಕರ್ನಾಟಕ ಪರ ದೇವದತ್ತ ಪಡಿಕ್ಕಲ್ 62 ರನ್ ಗಳಿಸಿ ಕೊಂಚ ಹೋರಾಟದ ಮನೋಭಾವ ತೋರಿದರು. ಆದರೆ ಅವರಿಗೆ ತಕ್ಕ ಸಾಥ್ ಸಿಗದೇ ಹೋಯಿತು. ಅನುಭವಿಗಳಾದ ಕೆಎಲ್ ರಾಹುಲ್ ಶೂನ್ಯ, ಕರುಣ‍್ ನಾಯರ್ 6 ಮತ್ತು ಮನೀಶ್ ಪಾಂಡೆ ಕೇವಲ 12 ರನ್ ಗಳಿಸಿದ್ದು ರಾಜ್ಯ ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಬಂಗಾಳ ಪರ ದ್ವಿತೀಯ ಇನಿಂಗ್ಸ್ ನಲ್ಲಿ ಮಾರಕ ದಾಳಿ ಸಂಘಟಿಸಿದ ಮುಕೇಶ್ ಕುಮಾರ್ 6 ವಿಕೆಟ್ ಕಬಳಿಸಿದರು.