ಜೈಪುರ: ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಜೊತೆ ನಿಮಗೆ ಕಿರಿಕ್ ಇದ್ಯಾ ಎಂದು ಕೇಳಿದ್ದಕ್ಕೆ ಕೋಚ್ ರಾಹುಲ್ ದ್ರಾವಿಡ್ ನೀಡಿದ ಉತ್ತರ ಶಾಕಿಂಗ್ ಆಗಿದೆ.
ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಓವರ್ ನಲ್ಲಿ ಪಂದ್ಯ ಸೋತ ಬಳಿಕ ರಾಹುಲ್ ದ್ರಾವಿಡ್ ಮತ್ತು ಸಂಜು ಸ್ಯಾಮ್ಸನ್ ನಡುವೆ ಸಂಬಂಧ ಹಳಸಿದೆ ಎಂಬ ಸುದ್ದಿ ಹಬ್ಬಿತ್ತು. ಆಟಗಾರರ ಜೊತೆ ದ್ರಾವಿಡ್ ಮಾತುಕತೆ ನಡೆಸುತ್ತಿದ್ದರೆ ಸಂಜು ಮಾತ್ರ ಮುಖ ಸಪ್ಪಗೆ ಮಾಡಿಕೊಂಡು ಪ್ರತ್ಯೇಕವಾಗಿದ್ದ ವಿಡಿಯೋ ನೋಡಿ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವದಂತಿ ದಟ್ಟವಾಗಿತ್ತು.
ಈ ಬಗ್ಗೆ ಈಗ ಸ್ವತಃ ದ್ರಾವಿಡ್ ಮಾತನಾಡಿದ್ದಾರೆ. ಇಂತಹ ಸುದ್ದಿಗಳು ಎಲ್ಲಿಂದ ಬರುತ್ತದೋ ನನಗೆ ಗೊತ್ತಿಲ್ಲ. ಸಂಜು ಮತ್ತು ನಾನು ಒಂದೇ ತಂಡದಲ್ಲಿದ್ದೇವೆ. ಅವರು ನಮ್ಮ ತಂಡದ ಪ್ರಮುಖ ಭಾಗ. ಅವರು ತಂಡದ ಪ್ರತಿಯೊಂದು ಚರ್ಚೆ ಮತ್ತು ನಿರ್ಧಾರಗಳಲ್ಲಿ ಭಾಗಿಯಾಗುತ್ತಾರೆ. ಸತತವಾಗಿ ಪಂದ್ಯಗಳನ್ನು ಸೋಲುತ್ತಿರುವಾಗ ಇಂತಹ ಟೀಕೆ, ಟಿಪ್ಪಣಿಗಳು ಸಾಮಾನ್ಯ. ಆದರೆ ಈಗ ಹಬ್ಬಿರುವುದು ಆಧಾರ ರಹಿತ ಮಾಹಿತಿ. ಇದರ ಬಗ್ಗೆ ನಾನು ಏನೂ ಹೇಳಲಾರೆ. ತಂಡದ ವಾತಾವರಣ ಉತ್ತಮವಾಗಿದೆ. ಆಟಗಾರರು ಉತ್ತಮ ಪ್ರದರ್ಶನ ನೀಡದಿದ್ದರೆ ಎಷ್ಟು ನೋವುಂಟಾಗುತ್ತದೆ ಎಂದು ಜನರಿಗೆ ಅರ್ಥವಾಗುವುದಿಲ್ಲ ಎಂದಿದ್ದಾರೆ.