ಗುವಾಹಟಿ: ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಅಂಬಟಿ ರಾಯುಡು ಇಷ್ಟು ದಿನ ಆರ್ ಸಿಬಿಯನ್ನು ಗೇಲಿ ಮಾಡಿದ್ದಾಯ್ತು. ಈಗ ರಾಹುಲ್ ದ್ರಾವಿಡ್ ರನ್ನೇ ಪ್ರಶ್ನೆ ಮಾಡುವ ಭಂಡತನ ತೋರಿಸಿದ್ದಾರೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಾಲಿಗೆ ಶಸ್ತ್ರಚಿಕಿತ್ಸೆಗೊಳಗಾಗಿರುವ ರಾಹುಲ್ ದ್ರಾವಿಡ್ ಈಗ ವೀಲ್ ಚೇರ್ ನಲ್ಲಿ ಓಡಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ರಾಜಸ್ಥಾನ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಎಸ್ ಕೆ ವಿರುದ್ಧದ ನಿನ್ನೆಯ ಪಂದ್ಯಕ್ಕೆ ಮುನ್ನ ರಾಹುಲ್ ದ್ರಾವಿಡ್ ವೀಲ್ ಚೇರ್ ನಲ್ಲಿ ಬಂದು ಪಿಚ್ ವೀಕ್ಷಣೆ ಮಾಡಿದ್ದರು.
ಕಾಮೆಂಟರಿ ಮಾಡುತ್ತಿದ್ದ ಅಂಬಟಿ ರಾಯುಡು ಇದನ್ನು ಪ್ರಶ್ನೆ ಮಾಡಿದ್ದರು. ದ್ರಾವಿಡ್ ಗೆ ವೀಲ್ ಚೇರ್ ನಲ್ಲಿ ಪಿಚ್ ಬಳಿ ಬರಲು ಅನುಮತಿ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದ್ದರು. ಅವರ ಕಾಮೆಂಟ್ ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮದು ಅತಿಯಾಯ್ತು, ದ್ರಾವಿಡ್ ರಂತಹ ಬದ್ಧತೆಯಿರುವ ವ್ಯಕ್ತಿಯನ್ನೇ ಪ್ರಶ್ನೆ ಮಾಡುವಷ್ಟು ದೊಡ್ಡವರಾದ್ರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಇರ್ಫಾನ್ ಪಠಾಣ್ ರನ್ನು ಪಕ್ಷಪಾತಿಯಾಗಿ ಕಾಮೆಂಟರಿ ಮಾಡುತ್ತಾರೆ ಎಂಬ ಕಾರಣಕ್ಕೆ ಐಪಿಎಲ್ ಕ್ಯಾಮೆಂಟರಿ ಪ್ಯಾನೆಲ್ ನಿಂದಲೇ ಕಿತ್ತು ಹಾಕಲಾಗಿತ್ತು. ಅಂಬಟಿ ರಾಯುಡು ಕೂಡಾ ಇದೇ ರೀತಿ ಕಾಮೆಂಟರಿ ಮಾಡುತ್ತಿದ್ದಾರೆ. ಅವರನ್ನೂ ಕಿತ್ತು ಹಾಕಿ ಎಂದು ಅಭಿಮಾನಿಗಳು ಬಿಸಿಸಿಐಗೆ ಆಗ್ರಹಿಸಿದ್ದಾರೆ.