ಜೈಪುರ: ನಡೆದಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದರೂ ವಾಲ್ ರಾಹುಲ್ ದ್ರಾವಿಡ್ ರಾಜಸ್ಥಾನ್ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡಲು ಬಂದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ನಿರ್ಗಮಿಸಿದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ. ಈ ಸೀಸನ್ ನಿಂದ ದ್ರಾವಿಡ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಆದರೆ ಇನ್ನೇನು ಐಪಿಎಲ್ ಗೆ ಕ್ಷಣಗಣನೆ ಶುರುವಾಗಿದೆ ಎನ್ನುವಷ್ಟರಲ್ಲಿ ರಾಹುಲ್ ಗಾಯಗೊಂಡಿದ್ದಾರೆ. ಬೆಂಗಳೂರಿನಲ್ಲಿ ಪಂದ್ಯವೊಂದರಲ್ಲಿ ಆಡುವಾಗ ದ್ರಾವಿಡ್ ಮೀನಖಂಡಕ್ಕೆ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಈಗ ಕಾಲಿಗೆ ಬ್ಯಾಂಡೇಜ್ ಇದೆ. ನಡೆದಾಡುವ ಪರಿಸ್ಥಿತಿಯಲ್ಲಿ ಅವರಿಲ್ಲ.
ಹಾಗಿದ್ದರೂ ಊರುಗೋಲಿನ ಸಹಾಯದೊಂದಿಗೆ ರಾಜಸ್ಥಾನ್ ತಂಡದ ಕೋಚ್ ಕರ್ತವ್ಯ ನಿರ್ವಹಿಸಲು ಬಂದಿದ್ದಾರೆ. ಮೈದಾನದಲ್ಲಿ ಕುರ್ಚಿ ಹಾಕಿ ಕುಳಿತು ತಂಡದ ಆಟಗಾರರ ಅಭ್ಯಾಸ ವೀಕ್ಷಿಸಿದ್ದಾರೆ. ಎಲ್ಲಾ ಆಟಗಾರರನ್ನೂ ಮಾತನಾಡಿಸಿದ್ದಾರೆ. ಅವರ ಈ ಕರ್ತವ್ಯ ಪ್ರಜ್ಞೆಗೆ ನೆಟ್ಟಿಗರು ಸಲಾಂ ಹೇಳಿದ್ದಾರೆ. ನಿಜಕ್ಕೂ ದ್ರಾವಿಡ್ ಸ್ಪೂರ್ತಿ ಎಂದಿದ್ದಾರೆ.