Publish Date: Tue, 03 Sep 2024 (09:30 IST)
Updated Date: Tue, 03 Sep 2024 (09:33 IST)
ಚೆನ್ನೈ: ಟೀಂ ಇಂಡಿಯಾ ಕಂಡ ಶ್ರೇಷ್ಠ ಸ್ಪಿನ್ ಜೋಡಿಯಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಕೂಡಾ ಒಬ್ಬರು. ಆದರೆ ವಿದೇಶಕ್ಕೆ ಹೋದಾಗ ತನ್ನನ್ನು ಬಿಟ್ಟು ರವೀಂದ್ರ ಜಡೇಜಾಗೆ ಅವಕಾಶ ಕೊಟ್ಟಾಗ ಅವರಿಗೆ ಹೊಟ್ಟೆಯುರಿಯುತ್ತಾ ಎಂಬ ಪ್ರಶ್ನೆಗೆ ಸ್ವತಃ ಅಶ್ವಿನ್ ಉತ್ತರಿಸಿದ್ದಾರೆ.
ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ಜೋಡಿ ಟೆಸ್ಟ್ ಕ್ರಿಕೆಟ್ ನಲ್ಲಿ ಅನೇಕ ದಾಖಲೆಗಳನ್ನು ಮಾಡಿದೆ. ಈ ಇಬ್ಬರೂ ಭಾರತೀಯ ನೆಲದಲ್ಲಿ ಟೆಸ್ಟ್ ಪಂದ್ಯವಾಡುತ್ತಿದ್ದರೆ ಎದುರಾಳಿಗಳಿಗೆ ಸಿಂಹ ಸ್ವಪ್ನರಾಗಿರುತ್ತಾರೆ. ಆದರೆ ವಿದೇಶಕ್ಕೆ ಹೋದಾಗ ಅನಿವಾರ್ಯವಾಗಿ ಇಬ್ಬರಲ್ಲಿ ಒಬ್ಬರು ಆಡುವ ಬಳಗದಿಂದ ಹೊರಗಿರಬೇಕಾಗುತ್ತದೆ.
ಬಹುತೇಕ ಸಂದರ್ಭದಲ್ಲಿ ಅಶ್ವಿನ್ ರನ್ನೇ ಹೊರಗಿಡಲಾಗುತ್ತದೆ. ಅಶ್ವಿನ್ ಗೆ ಹೋಲಿಸಿದರೆ ಜಡೇಜಾ ಉತ್ತಮ ಬ್ಯಾಟಿಗ ಎನ್ನುವ ಕಾರಣಕ್ಕೆ ಅವರನ್ನೇ ಆಯ್ಕೆ ಮಾಡಲಾಗುತ್ತದೆ. ಯಾವುದೇ ಆಟಗಾರನಿಗಾದರೂ ತನ್ನನ್ನು ಬಿಟ್ಟು ಮತ್ತೊಬ್ಬನನ್ನು ಆಯ್ಕೆ ಮಾಡಿದಾಗ ಸಣ್ಣದಾಗಿ ಒಂದು ಹೊಟ್ಟೆಕಿಚ್ಚು ಆಗುವುದು ಸಹಜ.
ಅದೇ ರೀತಿ ಅಶ್ವಿನ್ ಗೂ ಆಗುತ್ತಾ ಎಂದು ಪತ್ರಕರ್ತ ವಿಮಲ್ ಕುಮಾರ್ ಅವರೊಂದಿಗಿನ ಸಂದರ್ಶನವೊಂದರಲ್ಲಿ ರವಿಚಂದ್ರನ್ ಅಶ್ವಿನ್ ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅಶ್ವಿನ್ ನಾನು ಆ ರೀತಿ ಹೊಟ್ಟೆ ಕಿಚ್ಚು ಪಡುವ ಮನುಷ್ಯ ಅಲ್ಲ. ನಾನು ಆಡದೇ ಇರುವುದಕ್ಕೆ ಜಡೇಜಾ ಕಾರಣವಾಗಿರುವುದಿಲ್ಲ. ನಾನು ಆತನಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿರುತ್ತೇನೆ. ತಂಡಕ್ಕೆ ನಾನು ಹೇಗೆ ಕೊಡುಗೆ ನೀಡಬಹುದು ಎಂದಷ್ಟೇ ಯೋಚಿಸುತ್ತಿರುತ್ತೇನೆ. ಹೊಟ್ಟೆಕಿಚ್ಚಿನ ಸ್ವಭಾವವನ್ನು ನಾವು ಮೆಟ್ಟಿ ನಿಲ್ಲಬೇಕಾಗುತ್ತದೆ ಎಂದು ಅಶ್ವಿನ್ ಹೇಳಿದ್ದಾರೆ.