ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನವಂಬರ್ 14 ರಿಂದ ಇಂಧೋರ್ ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಪಿಚ್ ತಯಾರಾಗಿರುವುದು ನೋಡಿದರೆ ವೇಗಿಗಳ ಮುಖವರಳಲೇಬೇಕು!
ಯಾಕೆಂದರೆ ಮೊದಲ ಟೆಸ್ಟ್ ಗೆ ತಯಾರು ಮಾಡಿದ ಪಿಚ್ ವೇಗಿಗಳಿಗೆ ಸ್ವರ್ಗದಂತಿದೆ. ಅದರಲ್ಲೂ ಟೀಂ ಇಂಡಿಯಾದಲ್ಲಿ ವೇಗಿಗಳ ಗಡಣವೇ ಇದ್ದು, ಈ ಪಿಚ್ ಖಂಡಿತಾ ತವರಿನ ತಂಡಕ್ಕೆ ಅನುಕೂಲ ಮಾಡಿಕೊಡಲಿದೆ.
ಮೊದಲೆ ಬಾಂಗ್ಲಾ ತಂಡದ ಬ್ಯಾಟಿಂಗ್ ಹೇಳಿಕೊಳ್ಳುವಷ್ಟು ಸಬಲವಾಗಿಲ್ಲ. ಇದರ ನಡುವೆ ವೇಗಿಗಳಿಗೆ ನೆರವಾಗುವ ಪಿಚ್ ತಯಾರಿಸಿದರಂತೂ ಕೇಳುವುದೇ ಬೇಡ. ಉಮೇಶ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಮುಂತಾದ ವೇಗಿಗಳಿಗೆ ಈ ಪಿಚ್ ಹೇಳಿ ಮಾಡಿಸಿದಂತಿದೆ.
ಕೆಂಪು ಮಣ್ಣು ಬಳಸಿ ಇಲ್ಲಿನ ಪಿಚ್ ತಯಾರಿಸಲಾಗುತ್ತಿದ್ದು, ರಣಜಿ ಪಂದ್ಯಗಳಲ್ಲೂ ಇದೇ ಪಿಚ್ ಬಳಸಲಾಗುತ್ತಿದೆ. ಕೆಂಪು ಮಣ್ಣು ಬಳಸಿ ಮಾಡಿದ ಪಿಚ್ ನಲ್ಲಿ ಬಾಲ್ ಹೆಚ್ಚು ಬೌನ್ಸ್ ಆಗುತ್ತದೆ. ಇದು ವೇಗಿಗಳಿಗೆ ವರದಾನ. ದಿನ ಕಳೆದ ಹಾಗೆ ಇಂತಹ ಪಿಚ್ ನಲ್ಲಿ ತಿರುವು ಕೂಡಾ ಸಿಗುತ್ತದೆ. ಹೀಗಾಗಿ ಇಲ್ಲಿ ವೇಗಿಗಳನ್ನು ಎದುರಿಸಿ ಗೆಲ್ಲುವವನೇ ನಿಜವಾದ ಜಯಶಾಲಿಯಾಗುತ್ತಾನೆ.