ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಜಯ ಗಳಿಸುವ ಮೂಲಕ ಶುಭಾರಂಭ ಮಾಡಿದೆ. ಆಸ್ಟ್ರೇಲಿಯಾವನ್ನು 6 ವಿಕೆಟ್ ಗಳಿಂದ ಟೀಂ ಇಂಡಿಯಾ ಸೋಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಭಾರತದ ಸ್ಪಿನ್ ದಾಳಿಗೆ ತತ್ತರಿಸಿ 199 ರನ್ ಗಳಿಗೆ ಆಲೌಟ್ ಆಯಿತು. ಈ ಸುಲಭ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ಭಾರೀ ಸಂಕಷ್ಟಕ್ಕೀಡಾಯಿತು. ರೋಹಿತ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡಾಗ ಭಾರತದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 2 ರನ್ ಆಗಿತ್ತು.
ಈ ವೇಳೆ ಜೊತೆಯಾದ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಜೋಡಿ ನಾಲ್ಕನೇ ವಿಕೆಟ್ ಗೆ 165 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ಅಭೂತಪೂರ್ವ ಗೆಲುವು ಕೊಡಿಸಿದರು. ಇದು ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ನಲ್ಲಿ ಭಾರತದ ಅತ್ಯುತ್ತಮ ಜೊತೆಯಾಟವಾಯಿತು. ಕೊಹ್ಲಿ 85 ರನ್ ಗಳಿಸಿದ್ದಾಗ ಔಟಾಗಿ ನಿರಾಸೆ ಅನುಭವಿಸಿದರು. ಆದರೆ ರಾಹುಲ್ 97 ರನ್ ಗಳಿಸಿ ಕೊನೆಯವರೆಗೆ ಅಜೇಯರಾಗುಳಿದರು.
ಆದರೆ ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆದ ರಾಹುಲ್ ಬಳಿಕ ಶತಕ ಪೂರೈಸಲಾಗದೇ ಇದ್ದಿದ್ದಕ್ಕೆ ಕ್ರೀಸ್ ನಲ್ಲೇ ಕೂತು ನಿರಾಸೆ ಹೊರಹಾಕಿದರು. ರಾಹುಲ್ 95 ರನ್ ಗಳಿಸಿದ್ದಾಗ ಭಾರತಕ್ಕೆ ಗೆಲುವಿಗೆ 5 ರನ್ ಬೇಕಾಗಿತ್ತು. ಈ ಹಂತದಲ್ಲಿ ರಾಹುಲ್ ಮೊದಲು ಬೌಂಡರಿ ಹೊಡೆದು ಬಳಿಕ ಸಿಕ್ಸರ್ ಸಿಡಿಸಿ ಶತಕ ಮತ್ತು ಗೆಲುವು ಎರಡನ್ನೂ ಪೂರ್ತಿಗೊಳಿಸುವ ಯೋಜನೆ ಹೊಂದಿದ್ದರು. ಅಷ್ಟು ಹೊತ್ತು ಕ್ರೀಸ್ ನಲ್ಲಿದ್ದು ತಂಡವನ್ನು ಸಂಕಷ್ಟದಿಂದ ಪಾರು ಮಾಡಿ ಅಸಾಧ್ಯ ಜಯ ಕೊಡಿಸಲು ನೆರವಾದ ರಾಹುಲ್ ಗೆ ಶತಕ ಅರ್ಹವಾಗಿತ್ತು. ಆದರೆ ದುರಾದೃಷ್ಟವಶಾತ್ ಅವರು ಬೌಂಡರಿಗೆಂದು ಬಾರಿಸಿದ ಚೆಂಡು ಸಿಕ್ಸರ್ ಆಯಿತು. ಹೀಗಾಗಿ ನಿರಾಸೆ ಅನುಭವಿಸಿದರು.
ಅಂತಿಮವಾಗಿ ಭಾರತ 41.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಈ ವಿಶ್ವಕಪ್ ಕೂಟದ ಮೊದಲ ಗೆಲುವು ಕಂಡಿತು.