ಮುಂಬೈ: ಈ ಬಾರಿ ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಗೆ ಸಿಗುತ್ತಿರುವ ನೀರಸ ಪ್ರತಿಕ್ರಿಯೆ ಬಗ್ಗೆ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ಜನಪ್ರಿಯ ಕ್ರೀಡೆ. ಆದರೆ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನೂ ಆಯೋಜಿಸಿರಲಿಲ್ಲ. ಬಹುಶಃ ಕೆಲವರಿಗೆ ಇನ್ನೂ ವಿಶ್ವಕಪ್ ಆರಂಭವಾಗಿದೆ ಎಂದೇ ಗೊತ್ತಿರಲ್ಲ. ಅಷ್ಟು ನೀರಸವಾಗಿ ಪ್ರಚಾರ ನೀಡಲಾಗಿದೆ. ಕೆಲವು ಕಡೆ ಮೈದಾನಗಳಲ್ಲಿ ಅವ್ಯವಸ್ಥೆಯ ಆರೋಪಗಳೂ ಕೇಳಿಬಂದಿದೆ.
ಹೆಚ್ಚು ಜನರು ಸೇರುವ ಮೈದಾನಗಳಲ್ಲಿ ಪ್ರಮುಖ ಪಂದ್ಯ ಆಯೋಜಿಸದೇ ಇರುವುದು, ಪ್ರಮುಖ ಪಂದ್ಯಗಳಿಗೆ ಮಳೆಯಾಗುತ್ತಿರುವುದು ವೀಕ್ಷಕರಲ್ಲಿ ನಿರಾಸಕ್ತಿ ಮೂಡಿಸಿದೆ. ಧರ್ಮಶಾಲಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಒದ್ದೆ ಔಟ್ ಫೀಲ್ಡ್ ನಿಂದಾಗಿ ಆಟಗಾರರು ಗಾಯಗೊಳ್ಳುವಂತಹ ಪರಿಸ್ಥಿತಿ ಎದುರಾಗಿತ್ತು. ಕೆಲವೆಡೆ ಸೀಟಿಂಗ್ ವ್ಯವಸ್ಥೆ ಬಗ್ಗೆಯೂ ಅಸಮಾಧಾನ ಕೇಳಿಬಂದಿದೆ. ವಿಶ್ವಕಪ್ ನಂತಹ ಪ್ರತಿಷ್ಠಿತ ಟೂರ್ನಿಯನ್ನು ಆಯೋಜಿಸುವಾಗ ಅದಕ್ಕೆ ತಕ್ಕ ವರ್ಣರಂಜಿತ ಪ್ರಚಾರ, ಅಬ್ಬರ ಯಾವುದೂ ಇಲ್ಲದೇ ಇಷ್ಟು ನೀರಸವಾಗಲು ಬಿಸಿಸಿಐ ಮೇಲೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಇದುವರೆಗೆ ನಡೆದ ಎಲ್ಲಾ ಪಂದ್ಯಗಳಿಗೂ ಜನರೇ ವಿರಳ ಸಂಖ್ಯೆಯಲ್ಲಿ ಹಾಜರಿದ್ದರು. ಕ್ರಿಕೆಟ್ ನನ್ನು ಧರ್ಮದಂತೆ ಪ್ರೀತಿಸುವ ಭಾರತದಲ್ಲೇ ಇಷ್ಟು ನೀರಸವಾಗಿ ವಿಶ್ವಕಪ್ ನಡೆಯುತ್ತಿರುವುದು ಎಲ್ಲರ ಬೇಸರಕ್ಕೆ ಕಾರಣವಾಗಿದೆ.