Publish Date: Sun, 08 Oct 2023 (08:30 IST)
Updated Date: Sun, 08 Oct 2023 (08:47 IST)
ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಇಂದು ಅತಿಥೇಯ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಇಂದು ಟೀಂ ಇಂಡಿಯಾ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಕೆಲವೇ ದಿನಗಳ ಮೊದಲು ಏಕದಿನ ಸರಣಿ ಆಡಿ, ಸರಣಿ ತನ್ನದಾಗಿಸಿಕೊಂಡಿತ್ತು. ಆದರೆ ಕೊನೆಯ ಪಂದ್ಯದಲ್ಲಿ ಪೂರ್ಣ ಪ್ರಮಾಣದ ಆಸೀಸ್ ತಂಡದ ಎದುರು ರೋಹಿತ್ ಪಡೆ ಸೋಲು ಕಂಡಿತ್ತು.
ಹಾಗಿದ್ದರೂ ಚೆನ್ನೈನ ಟರ್ನಿಂಗ್ ಪಿಚ್ ನಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಗಳು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. ತವರಿನಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಗಿಲ್ ಬದಲಾಗಿ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿಯಬಹುದು. ಅತ್ತ ಗ್ಲೆನ್ ಮ್ಯಾಕ್ಸ್ ವೆಲ್, ಡೇವಿಡ್ ವಾರ್ನರ್ ಅತ್ಯುತ್ತಮ ಫಾರ್ಮ್ ನಲ್ಲಿರುವುದು ಆಸೀಸ್ ಗೆ ಪ್ಲಸ್ ಪಾಯಿಂಟ್. ಇನ್ನು, ಬೌಲಿಂಗ್ ನಲ್ಲಿ ಮಿಚೆಲ್ ಸ್ಟಾರ್ಕ್ ರಂತಹ ಸ್ಟಾರ್ ಆಟಗಾರರಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಗೆಲುವಿಗೆ ಕಠಿಣ ಪ್ರಯತ್ನ ನಡೆಸಬೇಕಾಗಬಹುದು. ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ಸ್ ಸ್ಟಾರ್ ಆಪ್ ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು.