ಮುಂಬೈ: ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಪುರುಷರ ಕ್ರಿಕೆಟಿಗರಿಗೆ ಮಾಡಿದಂತೆ ವಿಕ್ಟರಿ ಪೆರೇಡ್ ಭಾಗ್ಯ ಇಲ್ಲ. ಇದಕ್ಕೆಲ್ಲಾ ಬೆಂಗಳೂರೇ ಕಾರಣ.
ಈ ಹಿಂದೆ ಪುರುಷರ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದಾಗ ಬಿಸಿಸಿಐ ಮುಂಬೈ ನಲ್ಲಿ ಬೃಹತ್ ರೋಡ್ ಶೋ ಆಯೋಜಿಸಿತ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಇಡೀ ಭಾರತ ತಂಡವೇ ತೆರೆದ ಬಸ್ ನಲ್ಲಿ ಲಕ್ಷಾಂತರ ಜನರ ನಡುವೆ ಪೆರೇಡ್ ಮಾಡಿದ್ದರು.
ಆದರೆ ಅದಾದ ಬಳಿಕ ಇತ್ತೀಚೆಗೆ ಐಪಿಎಲ್ ನಲ್ಲಿ ಆರ್ ಸಿಬಿ ಗೆಲುವಿನ ಬಳಿಕ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಕ್ಟರಿ ಪೆರೇಡ್ 11 ಜನರ ಸಾವಿಗೆ ಕಾರಣವಾಗಿತ್ತು. ಇದನ್ನು ಆಯೋಜಿಸಿದ್ದು ಆರ್ ಸಿಬಿ ಮತ್ತು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಹಾಗೂ ರಾಜ್ಯ ಸರ್ಕಾರ.
ಆದರೆ ಈ ದುರಂತದ ಬಳಿಕ ಬಿಸಿಸಿಐ ಗೆಲುವಿನ ಮೆರವಣಿಗೆ ಮಾಡಲು ಹಿಂದೇಟು ಹಾಕುತ್ತಿದೆ. ಈಗ ಕೂಡಾ ಭದ್ರತೆ ಸಮಸ್ಯೆಗಳಿವೆ. ಹೀಗಾಗಿ ಅನಗತ್ಯ ಅಪಾಯ ಮೈಮೇಲೆಳೆದುಕೊಳ್ಳಲು ಬಿಸಿಸಿಐ ತಯಾರಿಲ್ಲ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮಹಿಳಾ ಕ್ರಿಕೆಟಿಗರಿಗೂ ವಿಕ್ಟರಿ ಪೆರೇಡ್ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಬಿಸಿಸಿಐ ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸುವ ಇರಾದೆಯಲ್ಲಿಲ್ಲ.