ನವದೆಹಲಿ: ಯುವ ಬ್ಯಾಟರ್‌ಗಳಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ರಿಂಕು ಸಿಂಗ್ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಬಾಂಗ್ಲಾದೇಶ ಎದುರಿನ ಎರಡನೇ ಟಿ20 ಪಂದ್ಯವನ್ನು 86 ರನ್‌ಗಳಿಂದ ಜಯಿಸಿತು.
ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆ 2-0ಯಿಂದ ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಿತೀಶ್ ರೆಡ್ಡಿ (74 ರನ್) ಆಕರ್ಷಕ ಬ್ಯಾಟಿಂಗ್ ಮಾಡಿದರು. ರಿಂಕು (53 ರನ್) ಅವರೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಭಾರತ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 221 ರನ್ ಗಳಿಸಿತು.
ತಮ್ಮ ವೃತ್ತಿಜೀವನದ ಎರಡನೇ ಅಂತರರಾಷ್ಟ್ರೀಯ ಟಿ20 ಪಂದ್ಯವಾಡಿದ ನಿತೀಶ್ 27 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದರು. ಸರಣಿಯ ಮೊದಲ ಪಂದ್ಯದಲ್ಲಿ ಮಿಂಚಿದ್ದ ಹಾರ್ದಿಕ್ ಇಲ್ಲಿ ಮತ್ತೆ ಅಬ್ಬರಿಸಿದರು.
ಕಠಿಣ ಗುರಿಯನ್ನು ಬೆನ್ನಟ್ಟಿದ ಪ್ರವಾಸಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 135 ರನ್ ಗಳಿಸಿತು. ತಂಡದ ಮೆಹಮುದುಲ್ಲಾ (41 ರನ್) ಹೊರತುಪಡಿಸಿ ಉಳಿದವರು ನಿರಾಸೆ ಮೂಡಿಸಿದರು. ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ಮಿಂಚಿದ ನಿತೀಶ್ 2 ವಿಕೆಟ್ ಗಳಿಸಿದರು. ವರುಣ್ ಚಕ್ರವರ್ತಿ ಕೂಡ 2 ವಿಕೆಟ್ ಪಡೆದರು.