ದುಬೈ: ಏಷ್ಯಾ ಕಪ್ ಕ್ರಿಕಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆದ್ದ ಕಪ್ ಹೊತ್ತೊಯ್ದಿರುವ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕಪ್ ಬೇಕಿದ್ದರೆ ಸೂರ್ಯಕುಮಾರ್ ಯಾದವ್ ನನ್ನತ್ರನೇ ಬರಲಿ ಎಂದು ಹೊಸ ನಖರಾ ತೆಗೆದಿದ್ದಾರೆ.
ತಮ್ಮ ಬಳಿ ಟೀಂ ಇಂಡಿಯಾ ಕಪ್ ಸ್ವೀಕರಿಸಲು ನಿರಾಕರಿಸಿದರು ಎಂಬ ಕಾರಣಕ್ಕೆ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಟ್ರೋಫಿ ಮತ್ತು ಮೆಡಲ್ ಗಳನ್ನು ಆಟಗಾರರಿಗೆ ನೀಡದೇ ಹೊತ್ತೊಯ್ದಿದ್ದರು. ಇದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.
ಎಸಿಸಿ ಸಭೆಯಲ್ಲಿ ಬಿಸಿಸಿಐ ಪ್ರತಿನಿಧಿಗಳು ಇದೇ ವಿಚಾರವಾಗಿ ವಾಗ್ವಾದ ನಡೆಸಿದ್ದಾರೆ. ಕೆಲವು ಮೂಲಗಳ ಪ್ರಕಾರ ಮೊಹ್ಸಿನ್ ನಖ್ವಿ ಕಪ್ ಬೇಕಿದ್ದರೆ ಸ್ವತಃ ಸೂರ್ಯಕುಮಾರ್ ಯಾದವ್ ಎಸಿಸಿ ಕಚೇರಿಗೆ ಬಂದು ವೈಯಕ್ತಿಕವಾಗಿ ತಮ್ಮನ್ನು ಭೇಟಿ ಮಾಡಿ ಕಪ್ ಪಡೆಯಲಿ ಎಂದು ಷರತ್ತು ಹಾಕಿದ್ದಾರೆ ಎನ್ನಲಾಗಿದೆ.
ಆದರೆ ಇದಕ್ಕೆ ಬಿಸಿಸಿಐ ಒಪ್ಪುವ ಸಾಧ್ಯತೆಯಿಲ್ಲ. ಈ ಬಗ್ಗೆ ಐಸಿಸಿಗೆ ದೂರು ನೀಡಲು ತೀರ್ಮಾನಿಸಿದೆ. ಮೊಹ್ಸಿನ್ ನಖ್ವಿ ನಖರಾ ಮಾಡುತ್ತಿರುವುದು ಬಿಸಿಸಿಐಗೂ ಪ್ರತಿಷ್ಠೆಯ ವಿಚಾರವಾಗಿ ಪರಿಣಮಿಸಿದೆ.