ಮುಂಬೈ: ಏಷ್ಯಾ ಕಪ್ ನಲ್ಲಿ ಭಾರತ ಗೆದ್ದ ಟ್ರೋಫಿಯನ್ನು ತನ್ನ ಬಳಿ ಇಟ್ಟುಕೊಂಡು ಆಟ ಆಡಿಸುತ್ತಿರುವ ಎಸಿಸಿ ಅಧ್ಯಕ್ಷ, ಪಾಕಿಸ್ತಾನದ ಮೊಹ್ಸಿನ್ ನಖ್ವಿಗೆ ಭಾರತೀಯರು ತಿರುಗೇಟು ಕೊಟ್ಟಿದ್ದು ನಿನ್ನತ್ರನೇ ಇಟ್ಕೋ ಎಂದಿದ್ದಾರೆ.
ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಆದರೆ ಎಸಿಸಿ ಅಧ್ಯಕ್ಷರೂ ಆಗಿರುವ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿತ್ತು. ಹೀಗಾಗಿ ಹೊಟ್ಟೆ ಕಿಚ್ಚಿನಿಂದ ನಖ್ವಿ ಟೀಂ ಇಂಡಿಯಾಗೆ ನೀಡಬೇಕಾಗಿದ್ದ ಕಪ್, ಮೆಡಲ್ ಜೊತೆಗೆ ಚಾಂಪಿಯನ್ ಬೋರ್ಡ್ ನ್ನೂ ಹೋಟೆಲ್ ರೂಂಗೆ ಹೊತ್ತೊಯ್ದಿದ್ದರು.
ಈಗ ಟ್ರೋಫಿ ಕೊಡಬೇಕೆಂದರೆ ಮತ್ತೊಂದು ಸಮಾರಂಭ ಆಯೋಜಿಸಬೇಕು. ಆಗ ಟ್ರೋಫಿ ಕೊಡ್ತೇನೆ ಎಂದು ಮೊಹ್ಸಿನ್ ಕಂಡೀಷನ್ ಹಾಕುತ್ತಿದ್ದಾರೆ. ಇದಕ್ಕೆ ಭಾರತೀಯ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಭಾರತ ಯಾವತ್ತೋ ಚಾಂಪಿಯನ್ ಆಗಿ ಆಗಿದೆ. ಟ್ರೋಫಿ ಬೇಕಿದ್ದರೆ ನಿನ್ನತ್ರನೇ ಇಟ್ಕೋ. ಟ್ರೋಫಿ ನೋಡಿಕೊಂಡು ನೀವು ಅನುಭವಿಸಿದ ಸೋಲಿನ ಅವಮಾನ ಆಗಾಗ ನೆನಪು ಮಾಡಿಕೊಳ್ಳುತ್ತಿರಿ ಎಂದು ತಿರುಗೇಟು ಕೊಟ್ಟಿದ್ದಾರೆ. ಗೌರವ ತಾನಾಗಿಯೇ ಬರಬೇಕು. ಅದು ಬಿಟ್ಟು ಕಾಡಿ ಬೇಡಿ ಪಡೆಯುವಂತದ್ದಲ್ಲ. ಇನ್ನೊಬ್ಬರು ಗೆದ್ದ ಟ್ರೋಫಿಯನ್ನು ತಾನು ಇಟ್ಟುಕೊಳ್ಳುವುದು ಕಳ್ಳತನ ಮಾಡಿದಂತೆ ಎಂದು ವ್ಯಂಗ್ಯ ಮಾಡಿದ್ದಾರೆ.