ದುಬೈ: ಏಷ್ಯಾ ಕಪ್ ಕ್ರಿಕೆಟ್ 2025 ಚಾಂಪಿಯನ್ ಆಗಿರುವ ಟೀಂ ಇಂಡಿಯಾಗೆ ಕಪ್ ಕೊಡದೇ ಸತಾಯಿಸುತ್ತಿರುವ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈಗ ಹೊಸ ಷರತ್ತು ವಿಧಿಸಿದ್ದಾರೆ.
ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. ಆದರೆ ಎಸಿಸಿ ಅಧ್ಯಕ್ಷರೂ ಆಗಿರುವ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿತ್ತು. ಹೀಗಾಗಿ ಹೊಟ್ಟೆ ಕಿಚ್ಚಿನಿಂದ ನಖ್ವಿ ಟೀಂ ಇಂಡಿಯಾಗೆ ನೀಡಬೇಕಾಗಿದ್ದ ಕಪ್, ಮೆಡಲ್ ಜೊತೆಗೆ ಚಾಂಪಿಯನ್ ಬೋರ್ಡ್ ನ್ನೂ ಹೋಟೆಲ್ ರೂಂಗೆ ಹೊತ್ತೊಯ್ದಿದ್ದರು.
ಇದೀಗ ಮೊಹ್ಸಿನ್ ಖಾನ್ ವಿರುದ್ಧ ಐಸಿಸಿಗೆ ದೂರು ಕೊಡಲು ಬಿಸಿಸಿಐ ಚಿಂತನೆ ನಡೆಸಿದೆ. ಕಪ್ ತಾನಾಗಿಯೇ ಹಿಂದಿರುಗಿಸದಿದ್ದರೆ ಐಸಿಸಿಗೆ ದೂರು ಕೊಡುವುದಾಗಿ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಮೊಹ್ಸಿನ್ ಖಾನ್ ಹೊಸ ಷರತ್ತು ವಿಧಿಸಿದ್ದಾರೆ ಎನ್ನಲಾಗುತ್ತಿದೆ.
ಮತ್ತೊಮ್ಮೆ ಔಪಚಾರಿಕ ಸಮಾರಂಭ ಆಯೋಜಿಸಬೇಕು. ಅಲ್ಲಿ ಕಪ್ ಸ್ವೀಕರಿಸಬೇಕು. ಆದರೆ ಇದಕ್ಕೆ ಬಿಸಿಸಿಐ ಒಪ್ಪುವುದು ಕಷ್ಟ. ಹೀಗಾಗಿ ಕಪ್ ರಗಳೆ ಇನ್ನೆಲ್ಲಿಗೆ ಹೋಗಿ ಮುಟ್ಟುತ್ತದೋ ಎಂದು ಕಾದುನೋಡಬೇಕಿದೆ.