ಮುಂಬೈ: ಮಾನ ಮರ್ಯಾದೆ ಇದ್ರೆ ಮೊಹ್ಸಿನ್ ನಖ್ವಿ ಟೀಂ ಇಂಡಿಯಾ ಗೆದ್ದ ಟ್ರೋಫಿಯನ್ನು ಹಿಂದಿರುಗಿಸುತ್ತಾರೆ. ಇಲ್ಲ ಅಂದ್ರೆ ನಾವು ಬೇರೆಯೇ ದಾರಿ ಕಂಡುಕೊಳ್ಳಬೇಕಾಗುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸಾಯ್ಕಾ ಎಚ್ಚರಿಕೆ ನೀಡಿದ್ದಾರೆ.
ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ ಗೆದ್ದ ಬಳಿಕ ಎಸಿಸಿ ಅಧ್ಯಕ್ಷರಾಗಿರುವ ಪಾಕಿಸ್ತಾನದ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ. ಈ ಕಾರಣಕ್ಕೆ ನಖ್ವಿ ನನ್ನ ಟ್ರೋಫಿ, ನನ್ನ ಇಷ್ಟ ಎಂದು ಭಾರತ ಗೆದ್ದ ಟ್ರೋಫಿ, ಮೆಡಲ್ ಗಳ ಸಮೇತ ಹೋಟೆಲ್ ರೂಂಗೆ ತೆರಳಿದ್ದರು.
ಇದು ಈಗ ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್, ನಮ್ಮ ದೇಶದ ಜೊತೆಗೆ ಯುದ್ಧಕ್ಕೆ ನಿಂತ ದೇಶದ ಪ್ರತಿನಿಧಿಯಿಂದ ಟ್ರೋಫಿ ಸ್ವೀಕರಿಸುವುದು ನಮಗೆ ಇಷ್ಟವಿರಲಿಲ್ಲ. ಅದರ ಅರ್ಥ ಭಾರತ ಗೆದ್ದ ಟ್ರೋಫಿಯನ್ನು ಅವರೇ ತನ್ನ ಹೋಟೆಲ್ ಗೆ ಎತ್ತಿಕೊಂಡು ಹೋಗಬಹುದು ಎಂದಲ್ಲ. ಇದು ಅನಿರೀಕ್ಷಿತವಾಗಿತ್ತು. ಹಾಗಿದ್ದರೂ ಆತನಲ್ಲಿ ಸ್ವಲ್ಪವಾದರೂ ಮರ್ಯಾದೆ, ನೈತಿಕತೆ ಎನ್ನುವುದು ಏನಾದರೂ ಇದ್ದರೆ ಆತ ತಾನಾಗಿಯೇ ಭಾರತಕ್ಕೆ ಆ ಕಪ್, ಮೆಡಲ್ ಗಳನ್ನು ಹಿಂದಿರುಗಿಸಬೇಕು. ಇಲ್ಲದೇ ಹೋದರೆ ಮುಂದೆ ಬಿಸಿಸಿಐ ಇದೇ ವಿಚಾರವನ್ನು ಐಸಿಸಿ ಮತ್ತು ಎಸಿಸಿ ಸಭೆಗಳಲ್ಲಿ ಪ್ರಸ್ತಾಪಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.