ದುಬೈ: ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಮಾತನಾಡುವ ಇಂಗ್ಲಿಷ್ ಕೇಳಿ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಅಲ್ಲಿಗೆ ಇಂಗ್ಲಿಷ್ ಸತ್ತೇ ಹೋಯ್ತು ಎಂದು ಟ್ರೋಲ್ ಮಾಡುತ್ತಿದ್ದಾರೆ.
ಕೆಲವು ಕ್ರಿಕೆಟಿಗರಿಗೆ ಇಂಗ್ಲಿಷ್ ಸುಲಲಿತವಾಗಿ ಮಾತನಾಡಲು ಬರುವುದಿಲ್ಲ. ಬಹುತೇಕ ಪಾಕಿಸ್ತಾನ, ಬಾಂಗ್ಲಾದೇಶ, ಭಾರತದ ಕೆಲವು ಕ್ರಿಕೆಟಿಗರಿಗೆ ಈ ಸಮಸ್ಯೆಯಿದೆ. ಅದರಲ್ಲೂ ಪಾಕಿಸ್ತಾನದ ಬಹುತೇಕ ಕ್ರಿಕೆಟಿಗರು ಇಂಗ್ಲಿಷ್ ಮಾತನಾಡಲು ಪರದಾಡುತ್ತಾರೆ.
ಆದರೆ ವಿದೇಶಗಳಿಗೆ ಹೋದಾಗ ಪತ್ರಿಕಾಗೋಷ್ಠಿಗಳಲ್ಲಿ ಪಂದ್ಯದ ನಂತರದ ಕಾರ್ಯಕ್ರಮದಲ್ಲಿ ನಿರೂಪಕರು ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿದಾಗ ಉತ್ತರಿಸಬೇಕಾಗುತ್ತದೆ. ಇದೀಗ ಪಾಕ್ ನಾಯಕ ಮೊಹಮ್ಮದ್ ರಿಜ್ವಾನ್ ಕತೆಯೂ ಅದೇ ಆಗಿದೆ.
ಆದರೆ ಇಂಗ್ಲಿಷ್ ಸರಿಯಾಗಿ ಬಾರದ ರಿಜ್ವಾನ್ ತಮ್ಮದೇ ಶೈಲಿಯಲ್ಲಿ ಮಾತನಾಡುವುದನ್ನು ನೋಡಿ ನೆಟ್ಟಿಗರು ಇಂಗ್ಲಿಷ್ ಭಾಷೆ ಇಂಗ್ಲೆಂಡ್ ನಲ್ಲಿ ಹುಟ್ಟಿ ಪಾಕಿಸ್ತಾನದಲ್ಲಿ ಸತ್ತು ಹೋಯ್ತು ಎಂದು ಟ್ರೋಲ್ ಮಾಡಿದ್ದಾರೆ. ಇಂಗ್ಲಿಷ್ ಬರದೇ ಇದ್ದರೆ ಮಾತನಾಡಬೇಡಿ, ಯಾಕೆ ಈ ರೀತಿ ಮಾತನಾಡಿ ನಗೆಪಾಟಲಿಗೀಡಾಗುತ್ತಿದ್ದೀರಿ ಎಂದು ಕೆಲವರು ಅನುಕಂಪ ವ್ಯಕ್ತಪಡಿಸಿದ್ದಾರೆ.