ದುಬೈ: ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ನಿನ್ನೆ ಟೀಂ ಇಂಡಿಯಾ ಗೆಲುವಿನ ಜೊತೆಗೆ ವಿರಾಟ್ ಕೊಹ್ಲಿ ಶತಕ ಪೂರೈಸಲಿ ಎನ್ನುವುದು ಎಲ್ಲರ ಬಯಕೆಯಾಗಿತ್ತು. ಶತಕದ ಅಂಚಿನಲ್ಲಿದ್ದಾಗ ಪೆವಿಲಿಯನ್ ನಲ್ಲಿದ್ದ ನಾಯಕ ರೋಹಿತ್ ಶರ್ಮಾ ಸಿಕ್ಸರ್ ಹೊಡಿ ಎಂದು ಕೊಹ್ಲಿಗೆ ಸಲಹೆ ನೀಡಿದ ಫನ್ನಿ ವಿಡಿಯೋ ಈಗ ವೈರಲ್ ಆಗಿದೆ.
ಒಂದು ಹಂತದಲ್ಲಿ ಟೀಂ ಇಂಡಿಯಾ ಗೆಲುವಿಗೆ ಎರಡು ರನ್ ಬೇಕಾಗಿತ್ತು. ಆದರೆ ಕೊಹ್ಲಿ ಶತಕಕ್ಕೆ ಬೌಂಡರಿ ಬೇಕಾಗಿತ್ತು. ಈ ಹಂತದಲ್ಲಿ ಎಲ್ಲರ ಮುಖದಲ್ಲಿ ಟೆನ್ಷನ್ ಇತ್ತು. ಯಾಕೆಂದರೆ ಇಡೀ ಇನಿಂಗ್ಸ್ ನಲ್ಲಿ ಜವಾಬ್ಧಾರಿ ಹೊತ್ತು ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದ ಕೊಹ್ಲಿಗೆ ಒಂದು ಶತಕ ಅರ್ಹವಾಗಿತ್ತು. ಆದರೆ ಸಿಂಗಲ್ಸ್ ತೆಗೆಯುತ್ತಿದ್ದರೆ ಕೊಹ್ಲಿ ಶತಕ ಸಾಧ್ಯವಾಗುತ್ತಿರಲಿಲ್ಲ.
ಡಗೌಟ್ ನಲ್ಲಿ ಕುಳಿತಿದ್ದ ರೋಹಿತ್ ಶರ್ಮಾ ಮುಖದಲ್ಲಿ ಟೆನ್ಷನ್ ಜೊತೆಗೆ ನಗುವೂ ಇತ್ತು. ಅಲ್ಲಿಂದಲೇ ಕೊಹ್ಲಿಗೆ ನಗುತ್ತಾ ಒಂದು ಸಿಕ್ಸರ್ ಹೊಡಿ ಎಂದು ಸಲಹೆ ನೀಡಿದ್ದರು. ಆದರೆ ಕೊಹ್ಲಿ ಕೊನೆಗೆ ಬೌಂಡರಿ ಗಳಿಸಿ ಶತಕ ಪೂರೈಸಿದರು.
ಬಳಿಕ ಪೆವಿಲಿಯನ್ ಕಡೆ ನೋಡಿ ಟೆನ್ಷನ್ ಬೇಡ ರಿಲ್ಯಾಕ್ಸ್ ಎಂದು ಸನ್ನೆ ಮಾಡಿದರು. ಗೆಲುವಿನ ನಂತರ ಮೈದಾನಕ್ಕೆ ಬಂದು ಕೊಹ್ಲಿಯನ್ನು ಅಪ್ಪಿ ಅಭಿನಂದಿಸಿದ ರೋಹಿತ್ ಏನು ಟೆನ್ಷನ್ ಕೊಟ್ಟೆ ಎಂದು ನಗುತ್ತಲೇ ಬೆನ್ನು ತಟ್ಟಿದರು.