ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷರನ್ನಾಗಿ ದೆಹಲಿಯ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಅವರನ್ನು ನೇಮಿಸಲಾಗಿದೆ.
ಭಾನುವಾರ ಮುಂಬೈನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆ ಮುಕ್ತಾಯದ ನಂತರ ಮನ್ಹಾಸ್ ಅವರನ್ನು ಹೊಸ ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ.
ರೋಜರ್ ಬಿನ್ನಿ ಅವರ ಉತ್ತರಾಧಿಕಾರಿಯಾಗಿ ಮನ್ಹಾಸ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಾಜಿ ಕ್ರಿಕೆಟಿಗ ರಾಜೀವ್ ಶುಕ್ಲಾ ಅವರನ್ನು ಉಪಾಧ್ಯಕ್ಷರನ್ನಾಗಿ, ದೇವಜಿತ್ ಸೈಕಿಯಾ ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ಇದಲ್ಲದೆ, ಪ್ರಭತೇಜ್ ಸಿಂಗ್ ಭಾಟಿಯಾ ಜಂಟಿ ಕಾರ್ಯದರ್ಶಿಯಾಗಿ, ಕರ್ನಾಟಕದ ಎ. ರಘುರಾಮ್ ಭಟ್ ಮಂಡಳಿಯ ಖಜಾಂಚಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
45 ವರ್ಷದ ಮಿಥುನ್ ಮನ್ಹಾಸ್ ಮಾಜಿ ಆಲ್‌ರೌಂಡರ್ ಒಟ್ಟು 157 ಪ್ರಥಮ ದರ್ಜೆ ಪಂದ್ಯಗಳು, 130 ಲಿಸ್ಟ್ ಎ ಪಂದ್ಯಗಳು ಮತ್ತು 91 ಟಿ20 ಪಂದ್ಯಗಳನ್ನು ಆಡಿದ್ದಾರೆ.
157 ಪ್ರಥಮ ದರ್ಜೆ ಪಂದ್ಯಗಳಲ್ಲಿ ಮನ್ಹಾಸ್ 9,714 ರನ್ ಗಳಿಸಿದ್ದಾರೆ. 130 ಲಿಸ್ಟ್ ಎ ಪಂದ್ಯಗಳಲ್ಲಿ 4,126 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 91 ಟಿ 20 ಪಂದ್ಯಗಳಲ್ಲಿ 1,170 ರನ್ ಗಳಿಸಿದ್ದಾರೆ.
ಅವರು ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ನಲ್ಲಿ ಮೂರು ಫ್ರಾಂಚೈಸಿಗಳಾದ ಡೆಲ್ಲಿ ಡೇರ್‌ಡೆವಿಲ್ಸ್, ಪುಣೆ ವಾರಿಯರ್ಸ್ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ಗಳೊಂದಿಗೆ ಆಡಿದ್ದರು.