ನವದೆಹಲಿ: ಮುಂದಿನ ಐಪಿಎಲ್ ಗೆ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರಲಿದ್ದಾರೆಯೇ ಎಂಬ ಪ್ರಶ್ನೆಗೆ ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಸಂಜೀವ್ ಗೊಯೆಂಕಾ ಮುಂದಿನ ಐಪಿಎಲ್ ಗೆ ರಾಹುಲ್ ರನ್ನು ಉಳಿಸಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಕೆಎಲ್ ನಮ್ಮ ತಂಡದ ಅವಿಭಾಜ್ಯ ಅಂಗ ಎಂದಿದ್ದಾರೆ. ಆ ಮೂಲಕ ರಾಹುಲ್ ಮುಂದಿನ ಐಪಿಎಲ್ ಗೂ ಲಕ್ನೋದಲ್ಲಿಯೇ ಉಳಿದುಕೊಳ್ಳಲಿರುವುದು ಪಕ್ಕಾ ಆಗಿದೆ.
ಆದರೆ ರಾಹುಲ್ ರನ್ನು ನಾಯಕರಾಗಿ ಮುಂದುವರಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ನಾಯಕತ್ವದ ಬಗ್ಗೆ ನಾವಿನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ. ಹೀಗಾಗಿ ಮುಂದಿನ ಸೀಸನ್ ನಲ್ಲಿ ರಾಹುಲ್ ಲಕ್ನೋ ತಂಡದಲ್ಲಿ ಮುಂದುವರಿದರೂ ನಾಯಕರಾಗಿ ಮುಂದುವರಯುವುದು ಅನುಮಾನ ಎನ್ನಲಾಗಿದೆ.
ಇದಕ್ಕೆ ಮೊದಲು ರಾಹುಲ್ ಮೊನ್ನೆ ಸಂಜೀವ್ ಗೊಯೆಂಕಾರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಲಕ್ನೋದಲ್ಲಿಯೇ ಉಳಿದುಕೊಳ್ಳಲು ಬಯಸುವುದಾಗಿ ಸಂದೇಶ ನೀಡಿದ್ದರು. ಕಳೆದ ಸೀಸನ್ ನಲ್ಲಿ ರಾಹುಲ್ ಮೇಲೆ ಸಂಜೀವ್ ಮೈದಾನದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಈ ಸೀಸನ್ ನಲ್ಲಿ ರಾಹುಲ್ ಲಕ್ನೋ ತೊರೆಯಬಹುದು ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಈಗ ಎಲ್ಲದಕ್ಕೂ ತೆರೆ ಬಿದ್ದಿದೆ.