ಮುಂಬೈ: ಎಲ್ಲಾ ಮಾದರಿಯ ಕ್ರಿಕೆಟ್ ಗೆ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. ಆದರೆ ಇದು ವಿರಾಟ್ ಕೊಹ್ಲಿ ಅಲ್ಲ. ಅವರ ಜೊತೆಗೆ ಕ್ರಿಕೆಟ್ ಜೀವನ ಆರಂಭಿಸಿದ್ದ ತರುವರ್ ಕೊಹ್ಲಿ. 
									
			
			 
 			
 
 			
					
			        							
								
																	2008 ರಲ್ಲಿ ವಿಶ್ವಕಪ್ ಗೆದ್ದಿದ್ದ ಅಂಡರ್-19 ತಂಡದ ಸದಸ್ಯರಾಗಿದ್ದ ತರುವರ್ ಕೊಹ್ಲಿ ಈಗ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಅವರಿಗೆ 35 ವರ್ಷ. ವಿರಾಟ್ ಕೊಹ್ಲಿ ಜೊತೆಗೇ ವೃತ್ತಿ ಜೀವನ ಆರಂಭಿಸಿದ್ದ ತರುವರ್ ಕೊಹ್ಲಿಗೆ ಟೀಂ ಇಂಡಿಯಾದಲ್ಲಿ  ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
									
										
								
																	ಆಲ್ ರೌಂಡರ್ ಆಗಿದ್ದ ತರುವರ್ ಕೊಹ್ಲಿ ದೇಶೀಯ ಕ್ರಿಕೆಟ್ ನಲ್ಲಿ ಮಿಜೋರಾಂ ಪರ ಆಡಿದ್ದರು. ಪ್ರಥಮ ದರ್ಜೆ ಪಂದ್ಯದಲ್ಲಿ ಒಂದು ತ್ರಿಶತಕ ಕೂಡಾ ದಾಖಲಿಸಿದ್ದಾರೆ. ಇದುವರೆಗೆ 184 ಪಂದ್ಯವಾಡಿರುವ ತರುವರ್ ಕೊಹ್ಲಿ ಮೂರೂ ಮಾದರಿ ಕ್ರಿಕೆಟ್ ನಲ್ಲಿ 7543  ರನ್ ಗಳಿಸಿದ್ದಾರೆ. ಅಲ್ಲದೆ 133 ವಿಕೆಟ್ ಕೂಡಾ ಕಬಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್  ನಲ್ಲಿ 14 ಶತಕ ಮತ್ತು 18 ಅರ್ಧಶತಕ ಸಿಡಿಸಿದ್ದಾರೆ. ಪ್ರಥಮ ದರ್ಜೆ  ಕ್ರಿಕೆಟ್ ನಲ್ಲಿ 4573 ರನ್ ಮತ್ತು 74 ವಿಕೆಟ್ ಕಬಳಿಸಿದ್ದಾರೆ.
									
											
							                     
							
							
			        							
								
																	2008 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಅಂಡರ್-19 ವಿಶ್ವಕಪ್ ಗೆದ್ದಾಗ ತರುವರ್ ಕೊಹ್ಲಿ 6 ಪಂದ್ಯಗಳಿಂದ 3 ಅರ್ಧಶತಕ ಸೇರಿದಂತೆ 218 ರನ್ ಗಳಿಸಿದ್ದರು. ಆ ಬಾರಿ ಪಂದ್ಯಾವಳಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಬಳಿಕ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಪಂಜಾಬ್ ಪರ ಆಡಿದ್ದರು. ಆದರೆ ಐಪಿಎಲ್ ನಲ್ಲಿ ಅವರಿಗೆ ಹೇಳಿಕೊಳ್ಳುವ ಯಶಸ್ಸು ಸಿಕ್ಕಿರಲಿಲ್ಲ. ಹೀಗಾಗಿ ನಿಧಾನವಾಗಿ ತೆರೆಮರೆಗೆ ಸರಿದರು.