ಪರ್ಲ್: ಸೌತ್ ಆಫ್ರಿಕಾ ವಿರುದ್ಧ ಏಕದಿನ ಸರಣಿ ಬಳಿಕ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ತನಗೆ ಸಿಗಬೇಕಾಗಿದ್ದ ಪದಕವನ್ನು ಸಾಯಿ ಸುದರ್ಶನ್ ಗೆ ಕೊಡಿಸಿ ನಿಸ್ವಾರ್ಥತೆ ಮೆರೆದಿದ್ದಾರೆ.
ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಪ್ರತೀ ಸರಣಿ ಮುಗಿದ ಬಳಿಕ ಆಯಾ ಸರಣಿಯಲ್ಲಿ ಉತ್ತಮ ಫೀಲ್ಡಿಂಗ್ ಮಾಡಿದ ಆಟಗಾರನಿಗೆ ಬೆಸ್ಟ್ ಫೀಲ್ಡರ್ ಅವಾರ್ಡ್ ಕೊಡಿಸಲಾಗುತ್ತಿದೆ. ಫೀಲ್ಡಿಂಗ್ ಕೋಚ್ ಬೆಸ್ಟ್ ಫೀಲ್ಡರ್ ಯಾರು ಎಂದು ಘೋಷಣೆ ಮಾಡುತ್ತಾರೆ. ಅವರಿಗೆ ಪದಕ ನೀಡಿ ಗೌರವಿಸಲಾಗುತ್ತದೆ.
ಅದೇ ರೀತಿ ದ.ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಬೆಸ್ಟ್ ಫೀಲ್ಡರ್ ಪದಕಕ್ಕೆ ಕೆಎಲ್ ರಾಹುಲ್ ಫೀಲ್ಡಿಂಗ್ ಕೋಚ್ ನ ಮೊದಲ ಆಯ್ಕೆಯಾಗಿದ್ದರು. ಒಟ್ಟು ಆರು ಕ್ಯಾಚ್ ಪಡೆದ ರಾಹುಲ್ ಮತ್ತು ಒಂದು ಅತ್ಯುತ್ತಮ ಕ್ಯಾಚ್ ಪಡೆದ ಯುವ ಆಟಗಾರ ಸಾಯಿ ಸುದರ್ಶನ್ ಬೆಸ್ಟ್ ಫೀಲ್ಡರ್ ಅವಾರ್ಡ್ ಗೆ ರೇಸ್ ನಲ್ಲಿದ್ದರು.
ಆದರೆ ತಾನು ಒಂದು ಕ್ಯಾಚ್ ಕೈ ಚೆಲ್ಲಿದ್ದೆ ಎಂಬ ಕಾರಣಕ್ಕೆ ರಾಹುಲ್ ಆ ಪದಕವನ್ನು ಸಾಯಿ ಸುದರ್ಶನ್ ಗೆ ಕೊಡಲು ಸೂಚಿಸಿದ್ದಾರೆ. ಈ ಕಾರಣಕ್ಕೆ ಸಾಯಿ ಸುದರ್ಶನ್ ಗೆ ಬೆಸ್ಟ್ ಫೀಲ್ಡರ್ ಅವಾರ್ಡ್ ಸಿಕ್ಕಿದೆ. ಕೆಎಲ್ ರಾಹುಲ್ ನಿಸ್ವಾರ್ಥ ನಡೆಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.