ಚೆನ್ನೈ: ಐಪಿಎಲ್ 2024 ರಲ್ಲಿ ಧೋನಿ ನಿವೃತ್ತಿಯಾದರೆ ಚೆನ್ನೈ ಸೂಪರ್ ಕಿಂಗ್ಸ್ ಗೆ ಮುಂದಿನ ಆವೃತ್ತಿಗೆ ರೋಹಿತ್ ಶರ್ಮಾ ನಾಯಕರಾಗಬಹುದು ಎಂದು ಸಿಎಸ್ ಕೆ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಹೇಳಿದ್ದಾರೆ.
ಕಳೆದ ಆವೃತ್ತಿಯವರೆಗೆ ರೋಹಿತ್ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು. ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ ಪ್ರಶಸ್ತಿ ಗೆದ್ದು ಮುಂಬೈ ತಂಡದ ಯಶಸ್ವೀ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈ ಆವೃತ್ತಿಗೆ ರೋಹಿತ್ ರನ್ನು ಕಿತ್ತೊಗೆದು ಮುಂಬೈ ಇಂಡಿಯನ್ಸ್ ತಂಡ ಆ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯರನ್ನು ನೇಮಿಸಿದೆ. ಇದು ಅಭಿಮಾನಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವೀ ನಾಯಕ ಧೋನಿ ಇದೇ ವರ್ಷ ನಿವೃತ್ತಿಯಾದರೂ ಅಚ್ಚರಿಯಿಲ್ಲ. ಹೀಗಾಗಿ ಮುಂದಿನ ವರ್ಷಕ್ಕೆ ಮೊದಲು ನಡೆಯುವ ಮೆಗಾ ಹರಾಜಿನಲ್ಲಿ ರೋಹಿತ್ ಇನ್ನೊಂದು ತಂಡದ ಪಾಲಾಗಬಹುದು. ಆಗ ಚೆನ್ನೈ ಅವರನ್ನು ಖರೀದಿಸಿ ತಂಡದ ನಾಯಕನಾಗಿ ಮಾಡಬಹುದು ಎಂದು ಅಂಬಟಿ ರಾಯುಡು ಐಡಿಯಾ ಕೊಟ್ಟಿದ್ದಾರೆ.
ರೋಹಿತ್ ಇನ್ನೂ 5-6 ವರ್ಷ ಕ್ರಿಕೆಟ್ ಆಡಬಲ್ಲರು. ಅವರು ಮತ್ತೆ ನಾಯಕನಾಗಲು ಬಯಸಿದರೆ ಅವರಿಗೆ ಸಾಕಷ್ಟು ಆಯ್ಕೆಗಳಿವೆ. ಅವರು ಎಲ್ಲಿ ಬೇಕಾದರೂ ನಾಯಕನಾಗಬಹುದು. 2025 ರ ಐಪಿಎಲ್ ವೇಳೆಗೆ ಧೋನಿ ನಿವೃತ್ತಿಯಾದರೆ ರೋಹಿತ್ ಚೆನ್ನೈ ತಂಡಕ್ಕೆ ನಾಯಕನಾಗಲಿ ಎಂಬುದು ನನ್ನ ಆಸೆ ಎಂದು ಅವರು ಹೇಳಿದ್ದಾರೆ.