Publish Date: Wed, 13 Mar 2024 (09:56 IST)
Updated Date: Wed, 13 Mar 2024 (10:04 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಭಾಗಿಯಾಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾ ಡು ಪ್ಲೆಸಿಸ್ ಬಂದಾಯ್ತು. ಫಾ ಡು ಪ್ಲೆಸಿಸ್ ಟೀಂ ಸೇರಿಕೊಂಡ ವಿಚಾರವನ್ನು ಆರ್ ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಫಾ ಡು ಪ್ಲೆಸಿಸ್ ಬಳಿಕ ಈಗ ಎಲ್ಲರ ಕಣ್ಣು ಕಿಂಗ್ ಕೊಹ್ಲಿ ಮೇಲಿದೆ. ವಿರಾಟ್ ಕೊಹ್ಲಿ ಯಾವಾಗ ತಂಡ ಕೂಡಿಕೊಳ್ಳುತ್ತಾರೆ ಎಂದೇ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಫಾ ಡು ಪ್ಲೆಸಿಸ್ ಹೊರತಾಗಿ ಈಗಾಗಲೇ ತಂಡದ ಕೆಲವು ಆಟಗಾರರು ಬಂದಾಗಿದೆ. ಇನ್ನೀಗ ಒಬ್ಬೊಬ್ಬರೇ ಸ್ಟಾರ್ ಆಟಗಾರರು ತಂಡಕ್ಕೆ ಬಂದು ಸೇರಿಕೊಳ್ಳಲಿದ್ದಾರೆ.
ಮಾರ್ಚ್ 22 ರಂದು ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ಆರ್ ಸಿಬಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಹೀಗಾಗಿ ಈಗಾಗಲೇ ಎಲ್ಲಾ ಆಟಗಾರರು ಒಬ್ಬರಾದ ಮೇಲೊಬ್ಬರಂತೆ ತಂಡವನ್ನು ಕೂಡಿಕೊಳ್ಳುತ್ತಿದ್ದಾರೆ. ಕೇವಲ ಆರ್ ಸಿಬಿ ಮಾತ್ರವಲ್ಲ, ಎಲ್ಲಾ ಫ್ರಾಂಚೈಸಿಯ ಆಟಗಾರರೂ ತಮ್ಮ ತಂಡವನ್ನು ಕೂಡಿಕೊಳ್ಳುತ್ತಿದ್ದಾರೆ.
ವಿರಾಟ್ ಕೊಹ್ಲಿ ಬಹಳ ದಿನಗಳಿಂದ ಸಕ್ರಿಯ ಕ್ರಿಕೆಟ್ ನಲ್ಲಿ ಕಾಣಿಸಿಕೊಂಡಿಲ್ಲ. ಪತ್ನಿಯ ಹೆರಿಗೆ ನಿಮಿತ್ತ ಲಂಡನ್ ಗೆ ತೆರಳಿದ್ದ ಕೊಹ್ಲಿ ಇತ್ತೀಚೆಗಷ್ಟೇ ಭಾರತಕ್ಕೆ ಮರಳಿದ್ದಾರೆ. ಅವರೂ ಸದ್ಯದಲ್ಲೇ ಆರ್ ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿದೆ. ಅವರು ತಂಡವನ್ನು ಸೇರಿಕೊಂಡರೇ ಅಭಿಮಾನಿಗಳಿಗೆ ಹಬ್ಬವಾಗುತ್ತದೆ.