Publish Date: Thu, 02 May 2024 (11:18 IST)
Updated Date: Thu, 02 May 2024 (11:21 IST)
ಚೆನ್ನೈ: ಧೋನಿ ಗ್ರೇಟೆಸ್ಟ್ ಫಿನಿಶರ್ ಎಂಬ ಹೆಸರು ಮಾಡಿರಬಹುದು. ಆದರೆ ಕೆಲವೊಂದು ಸಾರಿ ಅವರು ಮಾಡುವ ತಪ್ಪುಗಳು ಅಭಿಮಾನಿಗಳಿಗೂ ಇಷ್ಟವಾಗುವುದಿಲ್ಲ. ಅಂತಹದ್ದೇ ಒಂದು ಸಂದರ್ಭಕ್ಕೆ ನಿನ್ನೆಯ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯ ಸಾಕ್ಷಿಯಾಯಿತು.
ಈ ಪಂದ್ಯವನ್ನು ಸಿಎಸ್ ಕೆ 7 ವಿಕೆಟ್ ಗಳಿಂದ ಸೋತಿತು. ಸಿಎಸ್ ಕೆ ಮೊದಲು ಬ್ಯಾಟಿಂಗ್ ಮಾಡಿತ್ತು. ಈ ವೇಳೆ ಫೈನಲ್ ಓವರ್ ನಲ್ಲಿ ಧೋನಿ ನಡೆದುಕೊಂಡ ರೀತಿ ನೆಟ್ಟಿಗರಿಗೆ ಇಷ್ಟವಾಗಿಲ್ಲ. ತಮ್ಮ ಜೊತೆಗಾರ ಡೆರಿಲ್ ಮಿಚೆಲ್ ಮೇಲೆ ಧೋನಿ ಕೂಗಾಡಿದ್ದು ನೆಟ್ಟಿಗರು ಅವರನ್ನು ಸ್ವಾರ್ಥಿ ಎಂದು ಜರೆದಿದ್ದಾರೆ.
ನಿನ್ನೆಯ ಪಂದ್ಯದಲ್ಲಿ 11 ಎಸೆತ ಎದುರಿಸಿ 14 ರನ್ ಗಳಿಸಿ ರನೌಟ್ ಆದರು. ಫೈನಲ್ ಓವರ್ ನಲ್ಲಿ ಧೋನಿ ಕ್ರೀಸ್ ನಲ್ಲಿದ್ದರು. ಎರಡನೇ ಎಸೆತವನ್ನು ಧೋನಿ ಹೊಡೆದ ಬಳಿಕವೂ ರನ್ ಗಾಗಿ ಓಡಲಿಲ್ಲ. ಆದರೆ ಸಹ ಆಟಗಾರ ಡೆರಿಲ್ ಮಿಚೆಲ್ ಓಡಲು ಬಯಸಿದ್ದರು. ಬಹುಶಃ ಧೋನಿ ಓಡಿದ್ದರೆ ತಂಡಕ್ಕಾಗಿ ಎರಡು ರನ್ ಒಟ್ಟುಗೂಡಿಸಬಹುದಿತ್ತು. ಆದರೆ ರಿಪ್ಲೇನಲ್ಲಿ ಧೋನಿ ಓಡಲು ನಿರಾಕರಿಸಿದ್ದು ಮಾತ್ರವಲ್ಲ ಮಿಚೆಲ್ ವಿರುದ್ಧ ಕೂಗಾಡಿದ್ದು ಸ್ಪಷ್ಟವಾಗಿತ್ತು.
ಅವರ ಈ ವಿಡಿಯೋ ನೋಡಿದ ನೆಟ್ಟಿಗರು ಸಹ ಆಟಗಾರನ ಸಾಮರ್ಥ್ಯದ ಮೇಲೆ ಧೋನಿಗೆ ನಂಬಿಕೆಯಿಲ್ಲ. ಅವರೊಬ್ಬ ಸ್ವಾರ್ಥಿಯಂತೆ ವರ್ತಿಸಿದರು ಎಂದು ಜರೆದಿದ್ದಾರೆ. ಮುಂದಿನ ಎಸೆತವನ್ನು ಧೋನಿ ಒಂದು ಬೌಂಡರಿ, ಒಂದು ಸಿಕ್ಸರ್ ಗಟ್ಟಿದರು. ಹಾಗಿದ್ದರೂ ಡೆರಿಲ್ ಮಿಚೆಲ್ ಜೊತೆ ನಡೆದುಕೊಂಡ ರೀತಿಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.