Publish Date: Wed, 01 May 2024 (11:00 IST)
Updated Date: Wed, 01 May 2024 (11:03 IST)
ಚೆನ್ನೈ: ಐಪಿಎಲ್ 2024 ರಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಹಾದಿ ಸುಗಮಗೊಳಿಸಲು ಪಂಜಾಬ್ ಕಿಂಗ್ಸ್ ವಿರುದ್ಧ ಉತ್ತಮ ಅವಕಾಶ ಸಿಕ್ಕಿದೆ. ಈ ಪಂದ್ಯ ತವರು ಚೆನ್ನೈ ನೆಲದಲ್ಲೇ ನಡೆಯುತ್ತಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡು ಸೋಲುಗಳ ನಂತರ ಕಳೆದ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. ಇದೀಗ ಅಗ್ರ 5 ರೊಳಗೆ ಉಳಿದುಕೊಳ್ಳಲು ಚೆನ್ನೈಗೆ ಇಂದಿನ ಪಂದ್ಯವನ್ನು ಗೆಲ್ಲೇಬೇಕಾಗಿದೆ. ಸದ್ಯಕ್ಕೆ ಸಿಎಸ್ ಕೆ 9 ಪಂದ್ಯಗಳಿಂದ 5 ಗೆಲುವುಗಳೊಂದಿಗೆ 10 ಅಂಕ ಸಂಪಾದಿಸಿದೆ.
ಸಿಎಸ್ ಕೆ ಇದುವರೆಗೆ ತವರಿನಲ್ಲಿ ಬಲಿಷ್ಠ ತಂಡವೆಂದು ಅನೇಕ ಬಾರಿ ಸಾಬೀತುಪಡಿಸಿದೆ. ಇಲ್ಲಿನ ಪಿಚ್ ನಲ್ಲಿ ಎದುರಾಳಿಗಳನ್ನು ಬೌಲಿಂಗ್ ನ್ನು ಕಟ್ಟಿ ಹಾಕುವುದು ಮತ್ತು ಬ್ಯಾಟಿಂಗ್ ನಲ್ಲಿ ಅಬ್ಬರಿಸುವುದು ಚೆನ್ನೈಗೆ ಚೆನ್ನಾಗಿಯೇ ಗೊತ್ತಾಗಿದೆ. ಹೀಗಾಗಿ ಪಂಜಾಬ್ ಎದುರು ಇಂದು ಗೆಲ್ಲುವ ಫೇವರಿಟ್ ತಂಡವಾಗಿದೆ.
ಇತ್ತ ಪಂಜಾಬ್ ತಂಡಕ್ಕೆ ಈ ಸೀಸನ್ ನಲ್ಲಿ ಸತತ ಸೋಲುಗಳ ನಂತರ ಕಳೆದ ಪಂದ್ಯದಲ್ಲಿ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತೆ ಗೆಲುವು ಸಿಕ್ಕಿತ್ತು. ಕಳೆದ ಪಂದ್ಯದಲ್ಲಿ ಗಾಯದಿಂದಾಗಿ ನಾಯಕ ಶಿಖರ್ ಧವನ್ ಆಡಿರಲಿಲ್ಲ. ಅವರ ಸ್ಥಾನದಲ್ಲಿ ಸ್ಯಾಮ್ ಕುರೆನ್ ಅದ್ಭುತವಾಗಿ ತಂಡ ಮುನ್ನಡೆಸಿದ್ದರು. ಹಾಗಿದ್ದರೂ 9 ಪಂದ್ಯಗಳಿಂದ ಕೇವಲ 3 ಗೆಲುವು ಕಂಡಿರುವ ಪಂಜಾಬ್ ಗೆ ಪ್ಲೇ ಆಫ್ ಹಾದಿ ಕಷ್ಟವಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.