Publish Date: Mon, 01 Apr 2024 (14:56 IST)
Updated Date: Mon, 01 Apr 2024 (14:59 IST)
ವಿಶಾಖಪಟ್ಟಣಂ: ತಮ್ಮ 42 ನೆಯ ವಯಸ್ಸಿನಲ್ಲೂ ಐಪಿಎಲ್ ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಮಾಡುತ್ತಿದ್ದಾರೆ.
ಈ ವಯಸ್ಸಿನಲ್ಲಿ ಬ್ಯಾಟಿಂಗ್ ಮಾಡುವುದೇನೋ ಸರಿ. ಆದರೆ ಕೀಪಿಂಗ್ ಕೂಡಾ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಧೋನಿ ವಯಸ್ಸು ತಮಗೆ ಒಂದು ವಿಷಯವೇ ಅಲ್ಲ ಎನ್ನುವಂತೆ ಚಿಗರೆಯಂತೆ ಹಾರಿ ಸ್ಟಂಪ್ಸ್ ಹಿಂದೆ ಮ್ಯಾಜಿಕ್ ಮಾಡುತ್ತಿದ್ದಾರೆ. ವಯಸ್ಸು 40 ದಾಟಿದರೂ ಕ್ರಿಕೆಟ್ ಆಡುತ್ತಿರುವುದೇ ಅಚ್ಚರಿ.
ಧೋನಿ ಕಳೆದ ಆವೃತ್ತಿಯಲ್ಲೇ ತೀವ್ರ ಮಂಡಿ ನೋವಿನಿಂದ ಬಳಲಿದ್ದರು. ಮಂಡಿಗೆ ಐಸ್ ಪ್ಯಾಕ್ ಕಟ್ಟಿಕೊಂಡು ಪ್ರತೀ ಪಂದ್ಯದ ಬಳಿಕ ನೋವು ಸಹಿಸಿಕೊಂಡು ಇಡೀ ಋತುವಿನಲ್ಲಿ ತಂಡವನ್ನು ಮುನ್ನಡೆಸಿದ್ದರು. ಜೊತೆಗೆ ಸಿಎಸ್ ಕೆ ಚಾಂಪಿಯನ್ ಕೂಡಾ ಆಗಿತ್ತು.
ಈ ಬಾರಿ ಧೋನಿ ನಾಯಕತ್ವ ತ್ಯಜಿಸಿ ಕೇವಲ ವಿಕೆಟ್ ಕೀಪರ್ ಬ್ಯಾಟಿಗನಾಗಿ ಆಡುತ್ತಿದ್ದಾರೆ. ಆದರೆ ಧೋನಿ ಈಗಲೂ ಸಂಪೂರ್ಣ ಫಿಟ್ ಆಗಿಲ್ಲ. ವಿಶಾಖಪಟ್ಟಣಂ ಪಂದ್ಯದ ಬಳಿಕ ಧೋನಿ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧೋನಿ ಮಣಿಗಂಟಿನಿಂದ ಸ್ವಲ್ಪ ಮೇಲೆ ಐಸ್ ಪ್ಯಾಕ್ ಕಟ್ಟಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಅಂದರೆ ಧೋನಿ ಈಗಲೂ ನೋವಿನಲ್ಲೇ ಆಡುತ್ತಿದ್ದಾರೆ. ಇದು ಕೇವಲ ತನ್ನನ್ನು ದೇವರಂತೆ ಆರಾಧಿಸುವ ಅಭಿಮಾನಿಗಳಾಗಿ ಇರಬಹುದು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.