ಮುಂಬೈ: ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು ಬರೋಬ್ಬರಿ 14 ತಿಂಗಳ ಬಳಿಕ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.
ರೋಹಿತ್, ಕೊಹ್ಲಿ ಟಿ20 ವಿಶ್ವಕಪ್ ಆಡುತ್ತಾರೋ ಇಲ್ಲವೋ ಎಂಬ ಜಿಜ್ಞಾಸೆಯಲ್ಲಿದ್ದಾಗಲೇ ಇಬ್ಬರನ್ನೂ ಟಿ20 ತಂಡಕ್ಕೆ ಮರಳಿ ಕರೆಸಲಾಗಿದ್ದು, ಅಭಿಮಾನಿಗಳಿಗಂತೂ ಖುಷಿ ಮೇರೆ ಮೀರಿದೆ. ಇದರಿಂದಾಗಿ ಇಬ್ಬರೂ ಟಿ20 ವಿಶ್ವಕಪ್ ಆಡುವುದು ಖಚಿತ ಮತ್ತು ಈ ಬಾರಿ ಟೀಂ ಇಂಡಿಯಾ ರೋಹಿತ್ ನಾಯಕತ್ವದಲ್ಲೇ ಟಿ20 ವಿಶ್ವಕಪ್ ಆಡಲಿದೆ ಎನ್ನುವ ಸುಳಿವು ಸಿಕ್ಕಂತಾಗಿದೆ.
ಆದರೆ ಅನುಭವಿ ಆಟಗಾರ ಕೆಎಲ್ ರಾಹುಲ್ ಗೆ ವಿಶ್ರಾಂತಿ ನೀಡಲಾಗಿದೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆಗೆ ಅವರು ತಂಡಕ್ಕೆ ಕಮ್ ಬ್ಯಾಕ್ ಮಾಡುವ ಸಾಧ‍್ಯತೆಯಿದೆ. ಇನ್ನೊಂದು ಅಚ್ಚರಿಯೆಂದರೆ ಮಾನಸಿಕವಾಗಿ ಬಳಲಿರುವ ಕಾರಣಕ್ಕೆ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದ ಇಶಾನ್ ಕಿಶನ್ ರನ್ನು ಕಡೆಗಣಿಸಲಾಗಿದೆ. ಉಳಿದಂತೆ ಟೀಂ ಇಂಡಿಯಾ ಇಂತಿದೆ.
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷ್ ದೀಪ್ ಸಿಂಗ್, ಆವೇಶ್ ಖಾನ್, ಮುಕೇಶ್ ಕುಮಾರ್.