Publish Date: Sun, 06 Feb 2022 (08:40 IST)
Updated Date: Sun, 06 Feb 2022 (08:48 IST)
ಅಹಮ್ಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.
ಕೊರೋನಾಘಾತದ ನಡುವೆಯೂ ಟೀಂ ಇಂಡಿಯಾ ಇಂದು ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದೆ. ಬಹುತೇಕ ಪ್ರಮುಖ ಆಟಗಾರರಿಗೆ ಕೊರೋನಾ ಸೋಂಕು ತಗುಲಿರುವುದರಿಂದ ಇಂದಿನ ಪಂದ್ಯಕ್ಕೆ ಆಡುವ ಬಳಗವನ್ನು ಆರಿಸುವುದೇ ರೋಹಿತ್ ಮತ್ತು ಮ್ಯಾನೇಜ್ ಮೆಂಟ್ ಗೆ ದೊಡ್ಡ ತಲೆನೋವಾಗಲಿದೆ.
ಅತ್ತ ವೆಸ್ಟ್ ಇಂಡೀಸ್ ಕೂಡಾ ಸೀಮಿತ ಓವರ್ ಗಳಲ್ಲಿ ಅನಿರೀಕ್ಷಿತ ಆಘಾತ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಎದುರಾಳಿಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಡೆದ ಗೆಲುವು ಆ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಹೀಗಾಗಿ ಉತ್ತಮ ಪೈಪೋಟಿ ನಿರೀಕ್ಷಿಸಬಹುದು. ಇಂದಿನ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30 ಕ್ಕೆ ಆರಂಭವಾಗಲಿದೆ.