ದುಬೈ: ಏಷ್ಯಾ ಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯವನ್ನು ಹಲವರು ಬಹಿಷ್ಕರಿಸಲು ಕರೆ ನೀಡುತ್ತಿದ್ದಾರೆ. ಆದರೆ ಇದರ ನಡುವೆಯೂ ಟಿಕೆಟ್ ಗೆ ಭಾರೀ ಬೇಡಿಕೆ ಕಂಡುಬಂದಿದೆ.
ಆಪರೇಷನ್ ಸಿಂಧೂರ್ ದಾಳಿ ಬಳಿಕ ಪಾಕಿಸ್ತಾನ ಮತ್ತು ಭಾರತ ನಡುವಿನ ವೈರತ್ವ ಹೆಚ್ಚಾಗಿದೆ. ನಮ್ಮ ಮಹಿಳೆಯರ ಸಿಂಧೂರ ಅಳಿಸಲು ಕಾರಣವಾದ ದೇಶದವರ ವಿರುದ್ಧ ನಾವು ಕ್ರಿಕೆಟ್ ಪಂದ್ಯವಾಡಬಾರದು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಭಾರತ ಪಂದ್ಯವಾಡದಿದ್ದರೆ ಅದರ ಲಾಭ ಪಾಕಿಸ್ತಾನಕ್ಕೆ ಆಗಲಿದೆ. ಈ ಕಾರಣಕ್ಕೆ ಭಾರತ ಸರ್ಕಾರ ಕೂಡಾ ಏಷ್ಯಾ ಕಪ್ ನಲ್ಲಿ ಆಡಲು ಒಪ್ಪಿಗೆ ನೀಡಿದೆ.
ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದೆ. ಆದರೆ ಪಾಕಿಸ್ತಾನದ ವಿರುದ್ಧ ಪಂದ್ಯ ಬಹಿಷ್ಕರಿಸಲು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಕರೆ ಕೊಡುತ್ತಿದ್ದಾರೆ. ಹಾಗಿದ್ದರೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಎಂದಿನಂತೆಯೇ ಜನರಲ್ಲಿ ಉತ್ಸಾಹವೂ ಹೆಚ್ಚಿದೆ. ಇದಕ್ಕೆ ಮಾರಾಟವಾಗುತ್ತಿರುವ ಟಿಕೆಟ್ ಬೆಲೆಯೇ ಸಾಕ್ಷಿ.
ಒಂದು ಟಿಕೆಟ್ 2.57 ಲಕ್ಷ ರೂ.ಗೆ ಮಾರಾಟವಾಗಿ ದಾಖಲೆ ಬರೆದಿದೆ. ಈ ಟಿಕೆಟ್ ನಲ್ಲಿ ಉಚಿತ ಪಾರ್ಕಿಂಗ್, ಊಟದಿಂದ ಹಿಡಿದು ಎಲ್ಲಾ ರೀತಿಯ ಸೌಲಭ್ಯವೂ ಸಿಗಲಿದೆ. ಇದಲ್ಲದೆ ರಾಯಲ್ ಬಾಕ್ಸ್ ನಲ್ಲಿ ಟಿಕೆಟ್ ಗಳು 2.30 ಲಕ್ಷ ರೂ., ಸ್ಕೈ ಬಾಕ್ಸ್ ನಲ್ಲಿ 1.67 ಲಕ್ಷ ರೂ. ಗೆ ಮಾರಾಟವಾಗಿದೆ. ಇದು ಭಾರತ-ಪಾಕಿಸ್ತಾನ ಪಂದ್ಯಕ್ಕಿರುವ ಕ್ರೇಜ್ ಗೆ ಸಾಕ್ಷಿಯಾಗಿದೆ.