Publish Date: Sun, 08 Jul 2018 (08:29 IST)
Updated Date: Sun, 08 Jul 2018 (08:30 IST)
ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಮೂರನೇ ಮತ್ತು ಅಂತಿಮ ಟಿ20 ಪಂದ್ಯ ನಡೆಯುತ್ತಿದ್ದು, ಸರಣಿ ಸಮಬಲಗೊಂಡಿರುವುದರಿಂದ ಈ ಪಂದ್ಯಕ್ಕೆ ಫೈನಲ್ ಕಳೆ ಬಂದಿದೆ.
ಕಳೆದ ಪಂದ್ಯದಲ್ಲಿ ಭಾರತದ ರಿಸ್ಟ್ ಸ್ಪಿನ್ನರ್ ಗಳನ್ನು ಸಮರ್ಥವಾಗಿ ಆಂಗ್ಲರು ಎದುರಿಸಿದ್ದರಿಂದ ಭಾರತ ತನ್ನ ಹೊಸ ಗೇಮ್ ಪ್ಲ್ಯಾನ್ ಮಾಡಬೇಕಿದೆ. ಜತೆಗೆ ಬ್ಯಾಟಿಂಗ್ ನಲ್ಲಿ ಇನ್ನಷ್ಟು ಸ್ಥಿರ ಪ್ರದರ್ಶನ ಬರಬೇಕಿದೆ. ಮುಖ್ಯವಾಗಿ ಉತ್ತಮ ಆರಂಭ ಇದುವರೆಗೆ ದೊರಕಿಲ್ಲ.
ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತಕ್ಕೆ ಕಳೆದ ಪಂದ್ಯದಲ್ಲಿ ಎದುರಾಗಿತ್ತು. ಕೊನೆಯ ಓವರ್ ಗಳಲ್ಲಿ ಹೇಲ್ಸ್ ಸುಲಭವಾಗಿ ಚೆಂಡು ಬೌಂಡರಿ ಗೆರೆ ದಾಟಿಸುತ್ತಿದ್ದರು. ಭುವನೇಶ್ವರ್ ಕುಮಾರ್ ಏಕಾಂಗಿಯಾಗಿ ಕೊನೆಯಲ್ಲಿ ಏನೂ ಮಾಡಲಾಗಿಲ್ಲ. ಜತೆಗೆ ಕುಲದೀಪ್, ಯಜುವೇಂದ್ರ ಚಾಹಲ್ ಪರಿಣಾಮ ಬೀರದೇ ಭಾರತದ ಬೌಲಿಂಗ್ ಸೊರಗಿತ್ತು. ಈ ಪಂದ್ಯದಲ್ಲಿ ಆ ತಪ್ಪನ್ನು ಸರಿಪಡಿಸಿಕೊಂಡರೆ ಮಾತ್ರ ಭಾರತಕ್ಕೆ ಗೆಲುವು ಸಾಧ್ಯ.
ಬ್ರಿಸ್ಟೋಲ್ ನ ಕೌಂಟಿ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಸಂಜೆ 6.30 ಕ್ಕೆ ಪಂದ್ಯ ಆರಂಭವಾಗಲಿದೆ. ಸೋನಿ ನೆಟ್ ವರ್ಕ್ ನಲ್ಲಿ ಪಂದ್ಯದ ನೇರಪ್ರಸಾರ ವೀಕ್ಷಿಸಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.