ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವನಿತೆಯರ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನ ಮೊದಲ ಇನಿಂಗ್ಸ್ ನಲ್ಲಿ ಭಾರತ 406 ರನ್ ಗಳಿಸಿ ಆಲೌಟ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 219 ರನ್ ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ ಭಾರತಕ್ಕೆ 187 ರನ್ ಗಳ ಬೃಹತ್ ಮುನ್ನಡೆ ಸಿಕ್ಕಿದೆ. ಅಲ್ಲದೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳೆಯರ ಟೆಸ್ಟ್ ಪಂದ್ಯದಲ್ಲಿ ಭಾರತದ ದಾಖಲಿಸಿದ ಗರಿಷ್ಠ ಟೋಟಲ್ ಇದಾಗಿದೆ.
ನಿನ್ನೆ 7 ವಿಕೆಟ್ ನಷ್ಟಕ್ಕೆ 376 ರನ್ ಗಳಿಗೆ ದಿನದಾಟ ಮುಗಿಸಿದ್ದ ಭಾರತ ಇಂದು 30 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ನಿನ್ನೆಯ ದಿನದಂತ್ಯಕ್ಕೆ 70 ರನ್ ಗಳಿಸಿ ಅಜೇಯರಾಗುಳಿದಿದ್ದ ದೀಪ್ತಿ ಶರ್ಮಾ ಇಂದು ಮತ್ತೆ 8 ರನ್ ಗಳಿಸಿ ಔಟಾದರು. 30 ರನ್ ಗಳಿಸಿ ಅಜೇಯರಾಗಿದ್ದ ಪೂಜಾ ವಸ್ತ್ರಾಕರ್ 47 ರನ್ ಗಳಿಸಿ ಔಟಾದರು.
ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ವಿಕೆಟ್ ನಷ್ಟಿವಲ್ಲದೇ 5 ರನ್ ಗಳಿಸಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಈ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ.