Publish Date: Sun, 11 Jan 2026 (21:33 IST)
Updated Date: Sun, 11 Jan 2026 (21:36 IST)
ವಡೋದರಾ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಕೊನೆಗೂ ರೋಚಕವಾಗಿ 4 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 300 ರನ್ ಗಳಿಸಿತ್ತು. 301 ರನ್ ಗಳ ಗುರಿ ಬೆನ್ನತ್ತಿದ ಭಾರತಕ್ಕೆ ವಿರಾಟ್ ಕೊಹ್ಲಿ ಭರ್ಜರಿ 93 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ ಕೊಹ್ಲಿ ಔಟಾದ ಬಳಿಕ ಭಾರತ ಕೊಂಚ ಕುಸಿತಕ್ಕೊಳಗಾಯಿತು.
ಕೊನೆಯ ಐದು ಓವರ್ ಗಳಲ್ಲಿ ರನ್ – ಬಾಲ್ ಸಮ ಎನ್ನುವ ಸ್ಥಿತಿಯಿತ್ತು. ಕ್ರೀಸ್ ನಲ್ಲಿದ್ದ ಕೆಎಲ್ ರಾಹುಲ್ ಇದ್ದಿದ್ದು ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು. ಜೊತೆಗೆ ಹರ್ಷಿತ್ ರಾಣಾ ಬ್ಯಾಟಿಂಗ್ ಗೂ ಸೈ ಎನಿಸಿಕೊಂಡಿರುವುದರಿಂದ ಭಾರತ ರೋಚಕವಾಗಿ ಪಂದ್ಯ ಗೆಲ್ಲಲು ಸಾಧ್ಯವಾಯಿತು. ಹರ್ಷಿತ್ 23 ಎಸೆತಗಳಲ್ಲಿ 29 ರನ್ ಗಳಿಸಿದ್ದು ಭಾರತಕ್ಕೆ ಸಹಾಯವಾಯಿತು. ಆದರೆ ಕೊನೆಯ ಹಂತದಲ್ಲಿ ಅವರು ಔಟಾದಾಗ ಆತಂಕ ಎದುರಾಯಿತು.
ಆದರೆ ಈ ಹಂತದಲ್ಲಿ ವಾಷಿಂಗ್ಟನ್ ಸುಂದರ್ ಬಾಲ್ ವ್ಯರ್ಥ ಮಾಡದೇ ಸಿಂಗಲ್ಸ್ ಮೂಲಕ ರನ್ ಕದಿಯುತ್ತಾ ಸಾಗಿದರು. ಹಾಗಿದ್ದರೂ ನ್ಯೂಜಿಲೆಂಡ್ ಅಷ್ಟು ಸುಲಭವಾಗಿ ಗೆಲುವು ಬಿಟ್ಟುಕೊಡಲಿಲ್ಲ. ಕೊನೆಗೆ ಕೆಎಲ್ ರಾಹುಲ್ ಸತತ 2 ಬೌಂಡರಿ, ಸಿಕ್ಸರ್ ಗಳಿಸುವ ಮೂಲಕ ತಂಡದ ಗೆಲುವು ಸುಲಭವಾಗಿಸಿದರು. ಅಂತಿಮವಾಗಿ ಭಾರತ 49 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 306 ರನ್ ಗಳಿಸುವ ಮೂಲಕ 4 ವಿಕೆಟ್ ಗಳ ಗೆಲುವು ಸಾಧಿಸಿತು.