ಎಜ್ ಬಾಸ್ಟನ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಅಗ್ರ ಕ್ರಮಾಂಕ ಕಟ್ಟಿದ್ದ ಅಡಿಪಾಯವನ್ನು ಟೀಂ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟಿಗರು ಮಣ್ಣುಪಾಲು ಮಾಡಿದ್ದರು. ಆದರೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ತಪ್ಪು ತಿದ್ದಿಕೊಂಡ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ದೊಡ್ಡ ಮೊತ್ತ ಪೇರಿಸಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 587 ರನ್ ಗಳಿಗೆ ಆಲೌಟ್ ಆಗಿದೆ. ಇದಕ್ಕೆ ಕಾರಣವಾಗಿದ್ದು ಕ್ಯಾಪ್ಟನ್ ಶುಭ್ ಮನ್ ಗಿಲ್ ದ್ವಿಶತಕ.
ಇಂದಿನ ದಿನದಾಟದ ಹೈಲೈಟ್ಸ್ ಎಂದರೆ ಶುಭ್ ಮನ್ ಗಿಲ್ ಭರ್ಜರಿ ಬ್ಯಾಟಿಂಗ್. ನಾಯಕನಾಗಿ ಸತತ ಎರಡನೇ ಶತಕ ಸಿಡಿಸಿದ ಅವರು ಇಂದು ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಿದರು. ಇಂಗ್ಲೆಂಡ್ ನೆಲದಲ್ಲಿ ದ್ವಿಶತಕ ಭಾರಿಸಿದ ಭಾರತದ ಮೂರನೆ ಬ್ಯಾಟಿಗ ಎಂಬ ದಾಖಲೆ ಮಾಡಿದರು.
ಇಂದು ತ್ರಿಶತಕವನ್ನೂ ಪೂರೈಸುತ್ತಾರೇನೋ ಎಂಬ ನಿರೀಕ್ಷೆಗಳಿತ್ತು. ಆದರೆ 269 ರನ್ ಗಳಿಸಿದ್ದಾಗ ಜೋಶ್ ಟಂಗ್ ಎಸೆತದಲ್ಲಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಆದರೆ ನಾಯಕನಾಗಿ ಸ್ವತಃ ತಾವೇ ನಿಂತು ಆಡುವ ಮೂಲಕ ಇತರರಿಗೆ ಸ್ಪೂರ್ತಿಯಾದರು.
ಇಂದಿನ ಇನಿಂಗ್ಸ್ ಮತ್ತೊಂದು ಹೈಲೈಟ್ಸ್ ಎಂದರೆ ಭಾರತದ ಕೆಳ ಕ್ರಮಾಂಕದ ಬ್ಯಾಟಿಗರ ಪರಾಕ್ರಮ. ಕಳೆದ ಪಂದ್ಯದಲ್ಲಿ ಕೆಳ ಕ್ರಮಾಂಕದ ಬ್ಯಾಟಿಗರು ಕಳಪೆ ಮೊತ್ತಕ್ಕೆ ಔಟಾಗಿದ್ದು ಭಾರತಕ್ಕೆ ದುಬಾರಿಯಾಗಿತ್ತು. ಆದರೆ ಈ ಬಾರಿ 11 ನೆಯ ಬ್ಯಾಟಿಗನವರೆಗೂ ನಿಂತು ಆಡಿದ್ದು ವಿಶೇಷವಾಗಿತ್ತು. ಅದರಲ್ಲೂ ವಾಷಿಂಗ್ಟನ್ ಸುಂದರ್ 42 ರನ್ ಗಳ ಉಪಯುಕ್ತ ಇನಿಂಗ್ಸ್ ಆಡಿ ತಂಡದ ಮೊತ್ತ 500 ರ ಗಡಿ ದಾಟಲು ನೆರವಾದರು. ಇದೀಗ ಬೌಲರ್ ಗಳು ಬುಮ್ರಾ ಅನುಪಸ್ಥಿತಿಯಲ್ಲಿ ಏನು ಮಾಡುತ್ತಾರೆ ಕಾದು ನೋಡಬೇಕಿದೆ.