Publish Date: Fri, 17 Jul 2026 (08:48 IST)
Updated Date: Fri, 17 Jul 2026 (08:53 IST)
ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ಮತ್ತು ದಿಗ್ಗಜ ಓಪನರ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಅಂತರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಈಗ ದೊಡ್ಡ ಚರ್ಚೆ ಶುರುವಾಗಿದೆ. ಇಂಗ್ಲೆಂಡ್ ವಿರುದ್ಧ ಭಾನುವಾರ (ಜುಲೈ 19, 2026) ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯವೇ ಹಿಟ್‌ಮ್ಯಾನ್ ಕರಿಯರ್‌ನ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಗಲಿದೆಯೇ? ಎಂದು ಸದ್ಯ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆತಂಕ ಮತ್ತು ಕುತೂಹಲದಿಂದ ಚರ್ಚಿಸುತ್ತಿದ್ದಾರೆ.
ವರದಿಗಳ ಪ್ರಕಾರ, ಬಿಸಿಸಿಐ ಆಯ್ಕೆ ಮಂಡಳಿಯು ಈಗಾಗಲೇ ರೋಹಿತ್ ಶರ್ಮಾ ಅವರೊಂದಿಗೆ ಭವಿಷ್ಯದ ಯೋಜನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಟೀಮ್ ಇಂಡಿಯಾ ಮುಂದಿನ ಹಾದಿಯನ್ನು ಹುಡುಕಲು ಸಜ್ಜಾಗಿದೆ ಎಂಬ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಿರಿಯ ಆಯ್ಕೆ ಸಮಿತಿ ಮತ್ತು ಮುಖ್ಯ ತರಬೇತುದಾರ್ ಗೌತಮ್ ಗಂಭೀರ್ ಅವರು ರೋಹಿತ್ ಶರ್ಮಾ ಅವರೊಂದಿಗೆ ಇತ್ತೀಚೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
2027ರ ವಿಶ್ವಕಪ್ ಪ್ಲಾನ್‌ನಲ್ಲಿ ರೋಹಿತ್ ಹೆಸರಿಲ್ಲ: ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು, ಮುಂದಿನ 2027ರ ಏಕದಿನ ವಿಶ್ವಕಪ್‌ಗೆ ಯುವ ಆಟಗಾರರ ತಂಡವನ್ನು ಸಿದ್ಧಪಡಿಸಲು ನಿರ್ಧರಿಸಿದೆ. ಪ್ರಸ್ತುತ 39 ವರ್ಷ ವಯಸ್ಸಿನ ರೋಹಿತ್ ಶರ್ಮಾ ಅವರನ್ನು ಇಂಗ್ಲೆಂಡ್ ಸರಣಿಯ ನಂತರದ ಮುಂದಿನ ಪಂದ್ಯಗಳಿಗೆ ಆಯ್ಕೆ ಮಾಡುವ ಸಾಧ್ಯತೆ ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ.
ಯಶಸ್ವಿ ಜೈಸ್ವಾಲ್‌ಗೆ ಮಣೆ: ಅದ್ಭುತ ಫಾರ್ಮ್‌ನಲ್ಲಿರುವ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೆ ಮುಂಬರುವ ವೆಸ್ಟ್ ಇಂಡೀಸ್ ಸರಣಿಯಿಂದ ದೀರ್ಘಾವಧಿಯ ಅವಕಾಶಗಳನ್ನು ನೀಡಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ. ರೋಹಿತ್ ತಂಡದಲ್ಲಿದ್ದರೆ ಜೈಸ್ವಾಲ್‌ಗೆ ಹೆಚ್ಚಿನ ಪಂದ್ಯಗಳನ್ನು ಆಡಿಸಲು ಸಾಧ್ಯವಾಗುವುದಿಲ್ಲ ಎಂಬುದು ಸೆಲೆಕ್ಟರ್ಸ್ ಲೆಕ್ಕಾಚಾರವಾಗಿದೆ.
ರೋಹಿತ್ ಶರ್ಮಾ ಇತ್ತೀಚಿನ ಪಂದ್ಯಗಳಲ್ಲಿ ತಮ್ಮ ಎಂದಿನ ಚಿರಪರಿಚಿತ ಫಾರ್ಮ್ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಕಳೆದ 8 ಏಕದಿನ ಇನಿಂಗ್ಸ್‌ಗಳಲ್ಲಿ ಅವರು ಕೇವಲ 241 ರನ್ ಗಳಿಸಿದ್ದಾರೆ (ಸರಾಸರಿ 30.1). ಪ್ರಸ್ತುತ ಇಂಗ್ಲೆಂಡ್ ಸರಣಿಯ ಮೊದಲ ಪಂದ್ಯದಲ್ಲಿ 11 ರನ್ ಹಾಗೂ ಎರಡನೇ ಪಂದ್ಯದಲ್ಲಿ 26 ರನ್‌ಗಳಿಗೆ ಔಟ್ ಆಗಿರುವುದು ಅವರ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.
ವಿರಾಟ್ ಕೊಹ್ಲಿ ತಮ್ಮ ಫಿಟ್‌ನೆಸ್ ಹಾಗೂ ಫಾರ್ಮ್‌ನಿಂದಾಗಿ ತಂಡದಲ್ಲಿ ಆಟೋಮ್ಯಾಟಿಕ್ ಚಾಯ್ಸ್ ಆಗಿ ಮುಂದುವರಿದಿದ್ದರೂ, ರೋಹಿತ್ ಶರ್ಮಾ ವಿಷಯದಲ್ಲಿ ಆ ಸ್ಪಷ್ಟತೆ ಇಲ್ಲದಂತಾಗಿದೆ.
ಈಗಾಗಲೇ ಟಿ20 ಮತ್ತು ಟೆಸ್ಟ್‌ಗೆ ಗುಡ್‌ಬೈ
ರೋಹಿತ್ ಶರ್ಮಾ ಈಗಾಗಲೇ ಹಂತಹಂತವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುತ್ತಿದ್ದಾರೆ:
ಜೂನ್ 29, 2024: ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದ್ದರು.
ಮೇ 7, 2025: ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್‌ಗೂ ಅಧಿಕೃತವಾಗಿ ವಿದಾಯ ಹೇಳಿದ್ದರು.
ಪ್ರಸ್ತುತ ಅವರು ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ದೇಶವನ್ನು ಪ್ರತಿನಿಧಿಸುತ್ತಿದ್ದು, ಪ್ರಸ್ತುತ ಸರಣಿಯ ಬಳಿಕ ಶುಭ್‌ಮನ್ ಗಿಲ್ ನೇತೃತ್ವದ ತಂಡದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ.
ಬಿಸಿಸಿಐ ಮೂಲಗಳ ಪ್ರಕಾರ, "ಯಾರೂ ಕೂಡ ರೋಹಿತ್ ಶರ್ಮಾಗೆ ಬಲವಂತವಾಗಿ ನಿವೃತ್ತಿ ಘೋಷಿಸಿ ಎಂದು ಹೇಳಲು ಸಾಧ್ಯವಿಲ್ಲ. ಅವರು ಭಾರತೀಯ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಅಪಾರ. ಆದರೆ ಸೆಲೆಕ್ಟರ್ಸ್ ಮುಂದಿನ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಸರಣಿಯಿಂದ ಯುವ ಆಟಗಾರರತ್ತ ನೋಡಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ತಮ್ಮ ನಿವೃತ್ತಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ರೋಹಿತ್ ಅವರಿಗೇ ಬಿಡಲಾಗಿದೆ."
ಒಂದು ವೇಳೆ ಭಾನುವಾರದ ಲಾರ್ಡ್ಸ್ ಪಂದ್ಯವೇ ರೋಹಿತ್ ಅವರ ಕೊನೆಯ ಪಂದ್ಯವಾದರೆ, ಕ್ರಿಕೆಟ್ ಕಾಶಿ ಎಂದೇ ಕರೆಯಲ್ಪಡುವ ಲಾರ್ಡ್ಸ್ ಮೈದಾನದಲ್ಲಿ ಮತ್ತೊಬ್ಬ ಶ್ರೇಷ್ಠ ಇತಿಹಾಸದ ಸುವರ್ಣ ಯುಗ ಅಂತ್ಯಗೊಳ್ಳಲಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ