ಎಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಬೌಲರ್ ಪ್ರಸಿದ್ಧ ಕೃಷ್ಣ ಒಂದೇ ಓವರ್ ನಲ್ಲಿ 23 ರನ್ ಬಿಟ್ಟುಕೊಟ್ಟು ಹಿಗ್ಗಾ ಮುಗ್ಗಾ ಟ್ರೋಲ್ ಆಗಿದ್ದಾರೆ.
ಭಾರತ ಮೊದಲ ಇನಿಂಗ್ಸ್ ನಲ್ಲಿ 587 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಇತ್ತೀಚೆಗಿನ ವರದಿ ಬಂದಾಗ 5 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ. ಇಂಗ್ಲೆಂಡ್ ಪರ ಬೀಡು ಬೀಸಾದ ಬ್ಯಾಟಿಂಗ್ ಮಾಡುತ್ತಿರುವ ಜ್ಯಾಮಿ ಸ್ಮಿತ್ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸುತ್ತಿದ್ದು 49 ಎಸೆತದಿಂದ 59 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಬಿಗುವಿನ ದಾಳಿ ನಡೆಸಿ ವಿಕೆಟ್ ಗಳಿಸಿಕೊಟ್ಟರೆ ಆ ಶ್ರಮವನ್ನೆಲ್ಲಾ ಪ್ರಸಿದ್ಧ ನೀರಿನಲ್ಲಿ ಹೋಮ ಮಾಡಿದಂತೆ ವೇಸ್ಟ್ ಮಾಡಿದರು. ಶಾರ್ಟ್ ಆಫ್ ಲೆಂಗ್ತ್ ಬೌಲಿಂಗ್ ಮಾಡಿದ ಪ್ರಸಿದ್ಧ ಕೃಷ್ಣಗೆ ಇಂಗ್ಲೆಂಡ್ ಬ್ಯಾಟಿಗರು ಹಿಗ್ಗಾಮುಗ್ಗಾ ದಂಡಿಸಿದರು.
ಅದರಲ್ಲೂ ಒಂದೇ ಓವರ್ ನಲ್ಲಿ 23 ರನ್ ಬಿಟ್ಟುಕೊಟ್ಟು 2024 ರಲ್ಲಿ ರವೀಂದ್ರ ಜಡೇಜಾ ರಾಜ್ ಕೋಟ್ ನಲ್ಲಿ ಮಾಡಿದ ಬೇಡದ ದಾಖಲೆಯನ್ನು ಸರಿಗಟ್ಟಿದರು. ಒಂದೇ ಓವರ್ ನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಬಿಟ್ಟುಕೊಟ್ಟ ದಾಖಲೆ ಜಡೇಜಾ ಹೆಸರಿನಲ್ಲಿತ್ತು. ಪ್ರಸಿದ್ಧ ಬೌಲಿಂಗ್ ನೋಡಿ ನೆಟ್ಟಿಗರು ಇವರ ಬದಲು ಶ್ರಾದ್ಧೂಲ್ ಠಾಕೂರ್ ಹಾಕಬಹುದಿತ್ತು. ಮುಂದಿನ ಪಂದ್ಯಕ್ಕಾದರೂ ಪ್ರಸಿದ್ಧರನ್ನು ಡ್ರಾಪ್ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.