ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆಗಳು ಖಚಿತವಾಗಿದೆ. ಕನ್ನಡಿಗ ದೇವದತ್ತ ಪಡಿಕ್ಕಲ್ ಡೆಬ್ಯೂಟ್ ಮಾಡುವ ನಿರೀಕ್ಷೆಯಿದ್ದು, ರಜತ್ ಪಾಟೀದಾರ್ ಹೊರಹೋಗಲಿದ್ದಾರೆ.
ಕೆಎಲ್ ರಾಹುಲ್ ಐದನೇ ಟೆಸ್ಟ್ ಗೆ ಅಲಭ್ಯರಾದ ಬಳಿಕ ರಜತ್ ಪಾಟೀದಾರ್ ರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. ಆದರೆ ಸತವಾಗಿ ಅವಕಾಶ ನೀಡಿದರೂ ಕಳೆದ ಮೂರೂ ಪಂದ್ಯಗಳಲ್ಲಿ ರಜತ್ ಪಾಟೀದಾರ್ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯಕ್ಕೆ ಅವರಿಗೆ ತಂಡದಲ್ಲಿ ಅವಕಾಶ ಸಿಗದು.
ಅವರ ಬದಲಿಗೆ ಕನ್ನಡಿಗ ದೇವದತ್ತ ಪಡಿಕ್ಕಲ್ ಗೆ ಅವಕಾಶ ಸಿಗುವ ಸಾಧ‍್ಯತೆ ನಿಚ್ಚಳವಾಗಿದೆ. ರೋಹಿತ್ ಶರ್ಮಾ ಈ ಟೆಸ್ಟ್ ಸರಣಿಯಲ್ಲಿ ಅನೇಕ ಯುವ ಕ್ರಿಕೆಟಿಗರಿಗೆ ಚೊಚ್ಚಲ ಅವಕಾಶ ನೀಡಿದ್ದಾರೆ. ಇದೀಗ ದೇವದತ್ತ ಪಡಿಕ್ಕಲ್ ಗೂ ಅವಕಾಶ ನೀಡುವ ಸಾಧ‍್ಯತೆಯಿದೆ. ರಾಹುಲ್ ಕೂಡಾ ಇಲ್ಲದೇ ಇರುವುದರಿಂದ ಮಧ್ಯಮ ಕ್ರಮಾಂಕಕ್ಕೆ ಇನ್ನೊಬ್ಬ ಆಟಗಾರನನ್ನು ಆಯ್ಕೆ ಮಾಡುವುದು ಅನಿವಾರ್ಯ.
ದೇವದತ್ತ ಪಡಿಕ್ಕಲ್ ಈ ಬಾರಿ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿತ್ತು. ಕಳೆದ ಪಂದ್ಯದಲ್ಲೇ ದೇವದತ್ತ ಪಡಿಕ್ಕಲ್ ಗೆ ಅವಕಾಶ ಸಿಗುವ ನಿರೀಕ್ಷೆಯಿತ್ತು. ಆದರೆ ರಜತ್ ಪಟಿದಾರ್ ಗೆ ಇನ್ನೊಂದು ಅವಕಾಶ ನೀಡಲಾಗಿತ್ತು. ಹಾಗಿದ್ದರೂ ಅವರು ಅದನ್ನು ಬಳಸಿಕೊಳ್ಳಲಿಲ್ಲ. ಹೀಗಾಗಿ ಈ ಬಾರಿ ಕನ್ನಡಿಗ ಡೆಬ್ಯೂಟ್ ಮಾಡುವುದು ಖಚಿತವಾಗಿದೆ.