Select Your Language

Notifications

webdunia
webdunia
webdunia
webdunia

IND vs ENG test: ಇಂಗ್ಲೆಂಡ್ ವಿರುದ್ಧ ಗೆದ್ದು ಸರಣಿ ಕೈವಶ ಮಾಡಿದ ಟೀಂ ಇಂಡಿಯಾ

Dhruv Jurel

Krishnaveni K

ರಾಂಚಿ , ಸೋಮವಾರ, 26 ಫೆಬ್ರವರಿ 2024 (13:59 IST)
ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವನ್ನು 5 ವಿಕೆಟ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ತನ್ನದಾಗಿಸಿಕೊಂಡಿದೆ.

ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್ 192 ರನ್ ಗಳ ಸವಾಲು ನೀಡಿತ್ತು. ಈ ಮೊತ್ತ ಬೆನ್ನತ್ತಿದ ಭಾರತ ನಾಲ್ಕನೇ ದಿನವಾದ ಇಂದು 5 ವಿಕೆಟ್ ಕಳೆದುಕೊಂಡು 192 ರನ್ ಗಳಿಸುವ ಮೂಲಕ ಗೆಲುವು ತನ್ನದಾಗಿಸಿಕೊಂಡಿತು. ಜೊತೆಗೆ ಸರಣಿಯಲ್ಲಿ 3-1 ರ ಮುನ್ನಡೆ ಪಡೆಯಿತು. ಇದೀಗ ಕೊನೆಯ ಪಂದ್ಯ ಔಪಚಾರಿಕವಾಗಲಿದೆ.

ದ್ವಿತೀಯ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಕೇವಲ 145 ರನ್ ಗಳಿಗೆ ಆಲೌಟ್ ಆಗಿತ್ತು. ಮೊದಲ ಇನಿಂಗ್ಸ್ ಹಿನ್ನಡೆ ಸೇರಿದಂತೆ ಭಾರತ 192 ರನ್ ಗಳಿಸಬೇಕಿತ್ತು. ಮೊದಲ ವಿಕೆಟ್ ಗೆ ರೋಹಿತ್-ಜೈಸ್ವಾಲ್ ಜೋಡಿ ಭದ್ರ ಅಡಿಪಾಯ ಹಾಕಿಕೊಟ್ಟರು. ನಿನ್ನೆ ಅಜೇಯರಾಗುಳಿದಿದ್ದ ಈ ಜೋಡಿ ಇಂದು ಭಾರತದ ಮೊತ್ತ 84 ರನ್ ಆಗಿದ್ದಾಗ ಬೇರ್ಪಟ್ಟಿತು. ಜೈಸ್ವಾಲ್ 37 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ 99 ರನ್ ಗಳಿಸಿದ್ದಾಗ 55 ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮಾ ಪೆವಿಲಿಯನ್ ಹಾದಿ ಹಿಡಿದರು. ಅವರ ಬೆನ್ನಲ್ಲೇ ರಜತ್ ಪಾಟೀದಾರ್ ಕೂಡಾ ಶೂನ್ಯಕ್ಕೆ ನಿರ್ಗಮಿಸಿದಾಗ ಭಾರತಕ್ಕೆ ಸಂಕಷ್ಟ ಎದುರಾಗಿತ್ತು.

ಆದರೆ ಈ ವೇಳೆ ಜೊತೆಯಾದ ಶುಬ್ಮನ್ ಗಿಲ್-ರವೀಂದ್ರ ಜಡೇಜಾ ಜೋಡಿ ನಿಧಾನಗತಿಯ ಆಟವಾಡಲು ತೊಡಗಿತು. ಆದರೆ ಇದು ಫಲಗೂಡಲಿಲ್ಲ. ತಂಡದ ಮೊತ್ತ 120 ರನ್ ಗಳಾಗಿದ್ದಾಗ ಜಡೇಜಾ 4 ರನ್ ಗಳಿಗೆ ಔಟಾದರು. ಅವರ ಹಿಂದೆಯೇ ಸರ್ಫರಾಜ್ ಖಾನ್ ಕೂಡಾ ಶೂನ್ಯಕ್ಕೆ ನಿರ್ಗಮಿಸಿದಾಗ ಭಾರತ ಮತ್ತೊಮ್ಮೆ ಸಂಕಷ್ಟಕ್ಕೀಡಾಯಿತು. ಆದರೆ ಇನ್ನೊಂದೆಡೆ ಭದ್ರವಾಗಿ ನೆಲೆಯೂರಿದ್ದ ಗಿಲ್ 52 ರನ್ ಗಳಿಸಿ ಕೊನೆಯವರೆಗೂ ಅಜೇಯಾಗುಳಿದು ತಂಡಕ್ಕೆ ಜಯ ಕೊಡಿಸಿದರು. ಅವರಿಗೆ ಸಾಥ್ ನೀಡಿದ ಮೊದಲ ಇನಿಂಗ್ಸ್ ಹೀರೋ ಧ್ರುವ್ ಜುರೆಲ್ ಅಜೇಯ 39 ರನ್ ಸಿಡಿಸಿದರು. ಹೈದರಾಬಾದ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ ಹೀನಾಯ ಸೋಲುಂಡ ಬಳಿಕ ಟೀಂ ಇಂಡಿಯಾ ಸತತ ಮೂರೂ ಟೆಸ್ಟ್ ಗಳನ್ನೂ ಗೆದ್ದು ಸರಣಿ ತನ್ನದಾಗಿಸಿಕೊಂಡಿದ್ದು ವಿಶೇಷವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ಎಚ್ಚರಿಕೆಯಿಂದ ಗೆಲುವಿನ ಕಡೆಗೆ ಟೀಂ ಇಂಡಿಯಾ ನಡಿಗೆ