ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ಡ್ರಾ ಆದ ಬಳಿಕ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಅಂಕಪಟ್ಟಿ ಕತೆ ಏನಾಗಿದೆ ಇಲ್ಲಿದೆ ವಿವರ.
ನ್ಯೂಜಿಲೆಂಡ್ ವಿರುದ್ಧ ಎಲ್ಲಾ ಮೂರೂ ಪಂದ್ಯಗಳನ್ನು ಸೋತಿದ್ದರಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ 4-1 ಅಂತರದಿಂದ ಗೆಲ್ಲುವ ಅನಿವಾರ್ಯತೆ ಪಡೆದಿತ್ತು. ಇದಿಗ ಮೊದಲ ಪಂದ್ಯವನ್ನು ಗೆದ್ದು ಎರಡನೇ ಪಂದ್ಯವನ್ನು ಸೋತು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕಿಳಿದಿತ್ತು.
ಇದೀಗ ಮೂರನೇ ಟೆಸ್ಟ್ ಪಂದ್ಯ ಡ್ರಾ ಆಗಿರುವುದರಿಂದ ಭಾರತದ ಸ್ಥಾನ ಯಥಾಸ್ಥಿತಿಯಲ್ಲೇ ಇದೆ. ಆದರೆ ಈ ಪಂದ್ಯದಲ್ಲಿ ಎರಡೂ ತಂಡಗಳು ಸಮಾನವಾಗಿ ಅಂಕ ಹಂಚಿಕೊಂಡಿದೆ. ಇದೀಗ ಭಾರತ ಇನ್ನೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು ಆ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ.
ಉಳಿದ ಎರಡೂ ಪಂದ್ಯಗಳನ್ನು ಗೆದ್ದುಕೊಂಡರೆ ಯಾರ ಸಹಾಯವೂ ಇಲ್ಲದೇ ಫೈನಲ್ ಪ್ರವೇಶಿಸಬಹುದು. ಇನ್ನು ಒಂದೇ ಒಂದು ಪಂದ್ಯ ಸೋಲು ಅಥವಾ ಡ್ರಾ ಆದರೆ ತಂಡದ ಫೈನಲ್ ಲೆಕ್ಕಾಚಾರ ತಲೆಕೆಳಗಾಗಲಿದೆ. ಒಂದು ವೇಳೆ ಈ ಟೆಸ್ಟ್ ಸರಣಿ 2-2 ಅಂತರದಿಂದ ಡ್ರಾ ಆದರೆ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಆಸೀಸ್ ಸೋತರೆ ಮಾತ್ರ ಭಾರತಕ್ಕೆ ಫೈನಲ್ ಅವಕಾಶವಿರುತ್ತದೆ.