ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್ ತಪ್ಪಿದ್ದಕ್ಕೆ ಪಂದ್ಯ ಗೆದ್ದವರಂತೆ ಸಂಭ್ರಮಿಸಿದ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ವಿಡಿಯೋ ವೈರಲ್ ಆಗುತ್ತಿದ್ದಂತೇ ಭಾರೀ ಟೀಕೆ ವ್ಯಕ್ತವಾಗಿದೆ.
ಇಂದು ನಾಲ್ಕನೇ ದಿನದಂತ್ಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿ ದಿನದಾಟ ಮುಗಿಸಿದೆ. ಭಾರತದ ಪರ ರವೀಂದ್ರ ಜಡೇಜಾ 77, ಆಕಾಶ್ ದೀಪ್ ಅಜೇಯ 27, ಜಸ್ಪ್ರೀತ್ ಬುಮ್ರಾ ಅಜೇಯ 10 ರನ್ ಗಳಿಸಿ ತಂಡವನ್ನು ಫಾಲೋ ಆನ್ ಅವಮಾನದಿಂದ ಕಾಪಾಡಿದರು. ಫಾಲೋ ಆನ್ ತಪ್ಪುತ್ತಿದ್ದಂತೇ ಪೆವಿಲಿಯನ್ ನಲ್ಲಿ ಕೂತಿದ್ದ ಗಂಭೀರ್, ವಿರಾಟ್ ಪರಸ್ಪರ ಹೈ ಫೈ ನೀಡಿ ಕುಣಿದಾಡಿದರೆ ಇತ್ತ ರೊಹಿತ್ ಕೂಡಾ ಸಂಭ್ರಮದಲ್ಲಿದ್ದರು. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೇವಲ ಫಾಲೋ ಆನ್ ತಪ್ಪಿದ್ದಕ್ಕೆ ಈ ರೀತಿ ಸಂಭ್ರಮವೇ ಎಂದು ಹಲವರು ವ್ಯಂಗ್ಯ ಮಾಡಿದ್ದಾರೆ. ಗಂಭೀರ್ ಸ್ಟಾಂಡರ್ಡ್ ಯಾವ ಮಟ್ಟದಲ್ಲಿದೆ ಇದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಾಲ್ಕು ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ತಂಡವೊಂದು ಸೆಲೆಬ್ರೇಷನ್ ಮಾಡುವ ಪರಿ ಇದೇನಾ ಎಂದು ವ್ಯಂಗ್ಯ ಮಾಡಿದ್ದಾರೆ.
ಅದೇನೇ ಇದ್ದರೂ ಟೀಂ ಇಂಡಿಯಾಗೆ ಈಗ ಪಂದ್ಯ ಉಳಿಸುವ ಭರವಸೆ ಬಂದಿದೆ. ಮಳೆಯಿಂದಾಗಿ ಅಗಾಗ ಪಂದ್ಯ ಅಡಚಣೆಯಾಗುತ್ತಿರುವ ಕಾರಣ ಪಂದ್ಯ ಬಹುತೇಕ ಡ್ರಾನತ್ತ ಸಾಗಿದೆ. ನಾಳೆ ಒಂದೇ ದಿನ ಪಂದ್ಯ ಬಾಕಿಯಿದೆ.