ದುಬೈ: ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ನಲ್ಲಿ ಇಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಾಡುತ್ತಿರುವ ಟೀಂ ಇಂಡಿಯಾ ಟ್ರಾವಿಸ್ ಹೆಡ್ ವಿಕೆಟ್ ಪಡೆದು ಭರ್ಜರಿ ಸಂಭ್ರಮಪಟ್ಟಿದೆ. ಅದರ ವಿಡಿಯೋ ಈಗ ವೈರಲ್ ಆಗಿದೆ.
ಟ್ರಾವಿಸ್ ಹೆಡ್ ಕಳೆದ ಕೆಲವು ಸರಣಿಗಳಿಂದ ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿದ್ದಾರೆ. ಏಕದಿನ ವಿಶ್ವಕಪ್ ಫೈನಲ್, ಟಿ20 ವಿಶ್ವಕಪ್ ಹೀಗೆ ಎಲ್ಲಾ ಪಂದ್ಯಗಳಲ್ಲೂ ಟೀಂ ಇಂಡಿಯಾ ವಿರುದ್ಧ ಅತ್ಯುತ್ತಮವಾಗಿ ಆಡುವ ಟ್ರಾವಿಸ್ ಹೆಡ್ ಇಂದು ಕೂಡಾ ಉತ್ತಮ ಆರಂಭವನ್ನೇ ಪಡೆದಿದ್ದರು.
ಹೀಗಾಗಿ ಇಂದೂ ಮತ್ತೊಂದು ಬಿರುಸಿನ ಇನಿಂಗ್ಸ್ ಮೂಲಕ ಟೀಂ ಇಂಡಿಯಾಗೆ ತಲೆನೋವಾಗುವ ಎಲ್ಲಾ ಲಕ್ಷಣಗಳಿತ್ತು. ಆದರೆ 9 ನೇ ಓವರ್ ನಲ್ಲೇ ದಾಳಿಗಿಳಿದಿದ್ದ ಸ್ಪಿನ್ನರ್ ವರುಣ್ ಚಕ್ರವರ್ತಿ ಬಲೆಗೆ ಟ್ರಾವಿಸ್ ಬಿದ್ದರು.
ಎತ್ತಿ ಸಿಕ್ಸರ್ ಹೊಡೆಯಲು ಹೋಗಿ ಶುಬ್ಮನ್ ಗಿಲ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಆಗ ಅವರು 33 ಎಸೆತಗಳಿಂದ 2 ಸಿಕ್ಸರ್, 5 ಬೌಂಡರಿ ಸಹಿತ 39 ರನ್ ಗಳಿಸಿದ್ದರು. ಅವರ ವಿಕೆಟ್ ಕಿತ್ತೊಡನೇ ಟೀಂ ಇಂಡಿಯಾ ಆಟಗಾರರು ಭರ್ಜರಿ ಸಂಭ್ರಮ ಪಟ್ಟಿದ್ದಾರೆ. ಡ್ರೆಸ್ಸಿಂಗ್ ರೂಂನಲ್ಲಿದ್ದ ಕೋಚ್ ಗೌತಮ್ ಗಂಭೀರ್ ಹಾಗೂ ಇತರೆ ಸಿಬ್ಬಂದಿಗಳ ಮುಖದಲ್ಲೂ ಆ ಸಂತೋಷ ಕಾಣುತ್ತಿತ್ತು.
ಇನ್ನು, ಟೀಂ ಇಂಡಿಯಾ ಅಭಿಮಾನಿಗಳಂತೂ ವಿಷಲ್ ಹೊಡೆದು, ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಆದರೆ ಇದೀಗ ನಾಯಕ ಸ್ಟೀವ್ ಸ್ಮಿತ್ ನೆಲಕಚ್ಚಿ ಆಡುತ್ತಿದ್ದು 35 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 19 ಓವರ್ ಗಳಲ್ಲಿ 96 ರನ್ ಗಳಿಸಿದೆ.