ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ನಿನ್ನೆಯ ಪಂದ್ಯದಲ್ಲಿ ಸಾಧಿಸಿದ ಗೆಲುವು ಎಲ್ಲರ ಖುಷಿಗೆ ಕಾರಣವಾಗಿದೆ. ಈ ಗೆಲುವಿಗೆ ಕಾರಣ ಕೇವಲ ಸ್ಪಿನ್ನರ್ ವರುಣ್ ಚಕ್ರವರ್ತಿ ಅಲ್ಲ, ಇನ್ನೊಬ್ಬರ ನಿಸ್ವಾರ್ಥ ಆಟವೂ ಕಾರಣ.
ನ್ಯೂಜಿಲೆಂಡ್ ವಿರುದ್ಧ ನಿನ್ನೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಟಾಪ್ ಆರ್ಡರ್ ಗಳು ಕೈ ಕೊಟ್ಟಿದ್ದರು. ಒಂದು ಹಂತದಲ್ಲಿ ತಂಡ 200 ರ ಒಳಗೇ ಆಲೌಟ್ ಆಗುವ ಅಪಾಯದಲ್ಲಿತ್ತು. ಹೀಗಾಗಿದ್ದರೆ ಕಿವೀಸ್ ಸುಲಭವಾಗಿ ಪಂದ್ಯ ಗೆಲ್ಲುತ್ತಿತ್ತು.
ಆದರೆ ತಂಡಕ್ಕೆ ಪೈಪೋಟಿಯುತ ಮೊತ್ತ ಹಾಕಿಕೊಡಲು ಎಲ್ಲರೂ ಶ್ರೇಯಸ್ ಅಯ್ಯರ್ ಮತ್ತು ಅಕ್ಸರ್ ಪಟೇಲ್ ಇನಿಂಗ್ಸ್ ನ್ನು ಕೊಂಡಾಡುತ್ತಿದ್ದಾರೆ. ಆದರೆ ಇವರಿಬ್ಬರೇ ಅಲ್ಲ. ಇನ್ನೊಬ್ಬ ಆಟಗಾರನಿಂದಲೇ ತಂಡ ಪೈಪೋಟಿಕರ ಮೊತ್ತ ದಾಖಲಿಸಲು ಸಾಧ್ಯವಾಯಿತು.
ಅವರೇ ಹಾರ್ದಿಕ್ ಪಾಂಡ್ಯ. ಕೆಳ ಕ್ರಮಾಂಕದಲ್ಲಿ ಆಡಲಿಳಿಯುವ ಹಾರ್ದಿಕ್ ಪ್ರತೀ ಬಾರಿಯೂ ತಂಡಕ್ಕಾಗಿ ನಿಸ್ವಾರ್ಥ ಇನಿಂಗ್ಸ್ ಆಡುತ್ತಿದ್ದಾರೆ. ಆದರೆ ಅದು ಹೆಚ್ಚು ಗಮನಕ್ಕೇ ಬರುತ್ತಿಲ್ಲ. ಅವರು ಬಂದರೆ ಸಹ ಆಟಗಾರನ ಸೆಂಚುರಿ ಆಗಲು ಬಿಡಲ್ಲ ಎಂಬ ಅಪವಾದಗಳೆಲ್ಲವೂ ಇರಬಹುದು. ಆದರೆ ಪ್ರತೀ ಬಾರಿಯೂ ಅವರು ತಂಡಕ್ಕಾಗಿ ಆಡುತ್ತಾರೆ ಎನ್ನುವುದನ್ನು ಮಾತ್ರ ಮರೆಯಲಾಗದು.
ನಿನ್ನೆಯ ಪಂದ್ಯದಲ್ಲೂ ತಂಡ 240 ರ ಆಸುಪಾಸು ಬಂದಿದ್ದು ಅವರ ಬೀಡು ಬೀಸಾದ 45 ರನ್ ಗಳ ಕೊಡುಗೆಯಿಂದಾಗಿ. ಜೊತೆಗೆ ಬೌಲಿಂಗ್ ನಲ್ಲೂ ತಂಡಕ್ಕೆ ಅಗತ್ಯವಿದ್ದಾಗ ಬ್ರೇಕ್ ಥ್ರೂ ಕೊಡುವ ಹೀರೋ. ಹೀಗಾಗಿ ಈ ಗೆಲುವಿನ ಶ್ರೇಯಸ್ಸು ಹಾರ್ದಿಕ್ ಪಾಂಡ್ಯಗೂ ಸಲ್ಲುತ್ತದೆ.