Publish Date: Wed, 28 Aug 2019 (12:01 IST)
Updated Date: Wed, 28 Aug 2019 (12:05 IST)
ದುಬೈ: ವಿಶ್ವಕಪ್ ಮತ್ತು ಆಶಸ್ ಟೆಸ್ಟ್ ಕ್ರಿಕೆಟ್ ನಲ್ಲಿ ಮಿಂಚಿದ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ರನ್ನು ಕ್ರಿಕೆಟ್ ದೇವರು ಎಂದೇ ಕರೆಯಿಸಿಕೊಳ್ಳುವ ಸಚಿನ್ ತೆಂಡುಲ್ಕರ್ ಗಿಂತಲೂ ಗ್ರೇಟ್ ಎಂದ ಐಸಿಸಿಗೆ ಟ್ವಿಟರಿಗರು ತಪರಾಕಿ ನೀಡಿದ್ದಾರೆ.
ಸಚಿನ್ ತೆಂಡುಲ್ಕರ್ ಜತೆಗೆ ಸ್ಟೋಕ್ಸ್ ಇರುವ ಫೋಟೋವೊಂದನ್ನು ಪ್ರಕಟಿಸಿ ‘ಗ್ರೇಟೆಸ್ಟ್ ಕ್ರಿಕೆಟರ್ ಆಫ್ ಆಲ್ ಟೈಮ್ ವಿತ್ ಸಚಿನ್ ತೆಂಡುಲ್ಕರ್’ ಎಂದು ಬರೆದ ಐಸಿಸಿ ವಿಶ್ವಕಪ್ 2019 ಎಂಬ ಟ್ವಿಟರ್ ಪೇಜ್ ನ ಟ್ವೀಟ್ ಒಂದನ್ನು ಐಸಿಸಿ ರಿಟ್ವೀಟ್ ಮಾಡಿದೆ.
ಈ ಟ್ವೀಟ್ ಮುಖಾಂತರ ಐಸಿಸಿ ಸಚಿನ್ ಗಿಂತಲೂ ಸ್ಟೋಕ್ಸ್ ಶ್ರೇಷ್ಠ ಎಂದು ಹೇಳಿದಂತಾಗಿದೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇಂತಹ ತಲೆಬುಡವಿಲ್ಲದ ಟ್ವೀಟ್ ಮಾಡುವ ಮೊದಲು ಇಬ್ಬರ ದಾಖಲೆಗಳನ್ನು ಐಸಿಸಿ ನೋಡಲಿ ಎಂದು ಕೆಲವರು ಕುಟುಕಿದರೆ ಇನ್ನು ಕೆಲವರು ನೀವು ಹೇಳಿದ ಮೂರ್ಖ ಹೇಳಿಕೆಗಳನ್ನೆಲ್ಲಾ ನಾವು ನಂಬಕ್ಕಾಗಲ್ಲ ಎಂದು ಟೀಕಿಸಿದ್ದಾರೆ. ಅಲ್ಲದೆ ಕೆಲವರು ಹಲವು ಮೆಮೆಗಳ ಮೂಲಕ ಐಸಿಸಿಗೆ ಟಾಂಗ್ ಕೊಟ್ಟಿದ್ದಾರೆ.