ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸೋತ ಬಳಿಕ ಟೀಂ ಇಂಡಿಯಾ ಡಬ್ಲ್ಯುಟಿಸಿ ಫೈನಲ್ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಕೆಲವು ಅಂಕಗಳನ್ನು ಕಳೆದುಕೊಂಡಿದೆ. ಮೊದಲ ಸ್ಥಾನದಲ್ಲಿದ್ದ ಟೀಂ ಇಂಡಿಯಾ ಈಗ ಫೈನಲ್ ಗೆ ಕ್ವಾಲಿಫೈ ಆಗಲು ಎಷ್ಟು ಪಂದ್ಯ ಗೆಲ್ಲಬೇಕು ಇಲ್ಲಿದೆ ಲೆಕ್ಕಾಚಾರ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸೋತ ಬಳಿಕ ಟೀಂ ಇಂಡಿಯಾ ಗೆಲುವಿನ ಶೇಕಡಾ 74.24 ರಿಂದ 68.05 ಕ್ಕೆ ಇಳಿಕೆಯಾಗಿದೆ. ಅತ್ತ ಭಾರತವನ್ನು ಸೋಲಿಸಿದ ನ್ಯೂಜಿಲೆಂಡ್ ನಾಲ್ಕನೇ ಸ್ಥಾನಕ್ಕೆ ಏರಿದೆ. ಹಾಗಂತ ಇಲ್ಲಿಗೇ ಭಾರತದ ಡಬ್ಲ್ಯುಟಿಸಿ ಫೈನಲ್ ಕನಸು ಭಗ್ನವಾಗಲ್ಲ.
ಭಾರತ ಇನ್ನು ಡಬ್ಲ್ಯುಟಿಸಿ ರೌಂಡ್ಸ್ ನಲ್ಲಿ 7 ಟೆಸ್ಟ್ ಪಂದ್ಯವಾಡಬೇಕಿದೆ. ನ್ಯೂಜಿಲೆಂಡ್ ವಿರುದ್ಧ 2 ಮತ್ತು ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಒಳಗೊಂಡಿದೆ. ಈ ಏಳು ಟೆಸ್ಟ್ ಪಂದ್ಯಗಳ ಪೈಕಿ ಭಾರತ 5 ಟೆಸ್ಟ್ ಪಂದ್ಯ ಗೆದ್ದರೂ ಉಳಿದ ತಂಡಗಳ ಫಲಿತಾಂಶದ ಸಹಾಯವಿಲ್ಲದೇ ಫೈನಲ್ ಗೇರಬಹುದಾಗಿದೆ.
ಈಗಲೂ ಭಾರತ ನಂ.1 ಸ್ಥಾನದಲ್ಲೇ ಇದೆ. ಆದರೆ ಗೆಲುವಿನ ಶೇಕಡಾವಾರು ಇಲ್ಲಿ ಮುಖ್ಯವಾಗುತ್ತದೆ. ಸದ್ಯಕ್ಕೆ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಶೇ.62.05 ಗೆಲುವಿನ ಸರಾಸರಿ ಹೊಂದಿದೆ. ಭಾರತ ಮುಂದಿನ ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದರೆ ಮಾತ್ರ ಡಬ್ಲ್ಯುಟಿಸಿ ಫೈನಲ್ ಕನಸು ಜೀವಂತವಾಗಿರಲಿದೆ.