ಲಂಡನ್: ಭಾರತ ಮತ್ತು ಇಂಗ್ಲೆಂಡ್ ವನಿತೆಯರ ಏಕದಿನ ಸರಣಿಯನ್ನು ಭಾರತ ತಂಡ ತನ್ನದಾಗಿಸಿಕೊಂಡಿದೆ. ಕೊನೆಯ ಪಂದ್ಯದಲ್ಲಿ ತನಗೆ ಸಿಕ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಯುವ ಬೌಲರ್ ಕ್ರಾಂತಿ ಗೌಡ್ ಗೆ ನೀಡಿ ಹರ್ಮನ್ ಪ್ರೀತ್ ಕೌರ್ ಅಭಿಮಾನಿಗಳ ಮನಗೆದ್ದಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಶತಕ ದಾಖಲಿಸಿದ್ದರೆ ಕ್ರಾಂತಿ 6 ವಿಕೆಟ್ ಕಬಳಿಸಿ ಇಂಗ್ಲೆಂಡ್ ಬ್ಯಾಟಿಂಗ್ ಗೆ ಕಡಿವಾಣ ಹಾಕಿದರು. ಈ ಪಂದ್ಯವನ್ನು ಭಾರತ 13 ರನ್ ಗಳಿಂದ ಗೆದ್ದುಕೊಂಡಿತು. ಈ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತು.
ಹರ್ಮನ್ ಪ್ರೀತ್ ಕೌರ್ ಪಂದ್ಯಶ್ರೇಷ್ಠ ಮಾತ್ರವಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಆದರೆ ಈ ಪಂದ್ಯದ ಗೆಲುವಿಗೆ ಕ್ರಾಂತಿ ಬೌಲಿಂಗ್ ಕೂಡಾ ಕಾರಣವಾಗಿತ್ತು. ಹೀಗಾಗಿ ಪಂದ್ಯದ ಬಳಿಕ ತನಗೆ ಸಿಕ್ಕ ಪ್ರಶಸ್ತಿಯನ್ನು ಹರ್ಮನ್ ಬೌಲರ್ ಕ್ರಾಂತಿಗೆ ನೀಡಿದ್ದಾರೆ.
ಈ ಪ್ರಶಸ್ತಿಗೆ ನನಗಿಂತ ನೀನೇ ಅರ್ಹಳು ಎಂದು ಪ್ರೀತಿಯಿಂದಲೇ ಹರ್ಮನ್ ಪ್ರಶಸ್ತಿಯನ್ನು ಕ್ರಾಂತಿ ಕೈಗೊಪ್ಪಿಸಿದಾಗ ಆಕೆ ಭಾವುಕರಾಗಿದ್ದಾರೆ. ಆಗ ಹರ್ಮನ್ ತಬ್ಬಿಕೊಂಡು ಆಕೆಯನ್ನು ಅಭಿನಂದಿಸಿದ್ದಾರೆ.